ಮಂಡ್ಯ:ತಂದೆ ಮುಖ್ಯಮಂತ್ರಿ ಆಗಬೇಕು, ವರುಣ ಕ್ಷೇತ್ರದಲ್ಲಿ ಅವರ ಗೆಲುವು ಖಚಿತ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪುತ್ರ ಡಾ.ಯತಿಂದ್ರ ಸಿದ್ದರಾಮಯ್ಯ ತಿಳಿಸಿದರು. ಮಳವಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಮಗನಾಗಿ ತಂದೆ ಅವರು ಮುಖ್ಯಮಂತ್ರಿ ಆಗೋದು ಯಾರಿಗೆ ಆಸೆ ಇರಲ್ಲ ಹೇಳಿ. ಖಂಡಿತವಾಗಿ ಅವರು ಮುಖ್ಯಮಂತ್ರಿ ಆಗಬೇಕು ಎಂದು ಹೇಳಿದರು.
ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಸಿಕ್ಕು ತಂದೆ ಮುಖ್ಯಮಂತ್ರಿ ಆದರೆ, ಕಳೆದ ಬಾರಿಯಂತೆ ಆಡಳಿತಕ್ಕೆ ಮತ್ತೊಮ್ಮೆ ಪ್ರಾಮುಖ್ಯತೆ ಸಿಗುತ್ತದೆ. ಸಿದ್ದರಾಮಯ್ಯ ಸಿಎಂ ಆದರೆ ನಮ್ಮ ರಾಜ್ಯ ಅಭಿವೃದ್ಧಿ ಆಗುತ್ತದೆ. ಈ ಎಲ್ಲ ಕಾರಣದಿಂದ ನಮ್ಮ ತಂದೆ ಸಿಎಂ ಆಗಬೇಕು. ನಮ್ಮ ಪಕ್ಷ ಈಗಾಗಲೇ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ಘೋಷಣೆ ಮಾಡಿದೆ. ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆ ಸೇರಿದಂತೆ ಶೀಘ್ರದಲ್ಲಿ ಮತ್ತಷ್ಟು ಯೋಜನೆಗಳ ಪ್ರಣಾಳಿಕೆ ಬಿಡುಗಡೆಯಾಗಲಿದೆ ಎಂದರು.
ಇನ್ನು ವರುಣಾ ಕ್ಷೇತ್ರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಸ್ಪರ್ಧೆ ವಿಚಾರವಾಗಿ ಮಾತನಾಡಿ, ಕಳೆದ ಚುನಾವಣೆಯಲ್ಲೂ ವಿಜಯೇಂದ್ರ ಬರ್ತಾರೆ ಅಂತ ಹೇಳ್ತಿದ್ರು. ಆಗಲೂ ನಾನೇ ಅಭ್ಯರ್ಥಿ ಆಗಿದ್ದೆ. ಕ್ಷೇತ್ರದಲ್ಲಿ ಯಾರೇ ಪ್ರತಿಸ್ಪರ್ಧಿಗಳು ಬಂದರು ಫೈಟ್ ಮಾಡ್ತೇವೆ. ವರುಣಾ ಕ್ಷೇತ್ರ ರಚನೆ ಆದಾಗಿನಿಂದಲೂ ಕಾಂಗ್ರೆಸ್ ಗೆದ್ದುಕೊಂಡು ಬಂದಿದೆ. ವರುಣಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದೆ. ಯಾರೇ ಬಂದರೂ ಸಹ ನಮಗೆ ಭಯ ಇಲ್ಲಾ. ವರುಣಾ ಕ್ಷೇತ್ರದಲ್ಲಿ ಗೆದ್ದೆ ಗೆಲ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.