ಸಿದ್ದರಾಮಯ್ಯ ರಾಜಕೀಯ ಭವಿಷ್ಯ ನುಡಿದ ಮನೆ ದೇವರು ಮಂಡ್ಯ: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಬರುವ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಈಗಾಗಲೇ ನಿರ್ಧಾರ ಪ್ರಕಟಿಸಿದ್ದಾರೆ. ಆದರೆ, ಬೇರೆ ಬೇರೆ ಕ್ಷೇತ್ರಗಳ ಅಭಿಮಾನಿಗಳು ನಮ್ಮ ಕ್ಷೇತ್ರದಿಂದಲೇ ಸ್ಪರ್ಧಿಸಿ ಎಂದು ದುಂಬಾಲು ಬಿದ್ದಿದ್ದಾರೆ.
ಆದರೆ, ಮಂಡ್ಯದಲ್ಲಿ ಮಾತ್ರ ಉಲ್ಟಾ ಆಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಎರಡು ಕ್ಷೇತ್ರದಿಂದ ಸ್ಪರ್ಧೆ ಮಾಡಲೇಬೇಕು. ಒಂದು ಕ್ಷೇತ್ರದಿಂದ ಸ್ಪರ್ಧಿಸಿದರೆ ಸೋಲುಂಟಾಗುತ್ತದೆ ಎಂದು ಪೂಜಾರಿ ಮೈಮೇಲೆ ಬಂದ ಆದಿನಾಡು ಚಿಕ್ಕಮ್ಮ ದೇವಿ, ಸಿದ್ದು ಪುತ್ರ ಯತೀಂದ್ರಗೆ ಸಂದೇಶ ನೀಡಿದೆ. ಆದಿನಾಡು ಚಿಕ್ಕಮ್ಮ ದೇವಿ ಸಿದ್ದರಾಮಯ್ಯನವರ ಕುಟುಂಬದ ಮೂಲ ದೇವತೆ. ನಿಮಗೆ ಪ್ರಬಲ ಶಕ್ತಿಗಳ ವಿರೋಧ ಇದೆ. ನೀವು ಒಂದೆಡೆ ಬಾಹುಬಲ ಚಾಚಿದರೆ ಆಗಲ್ಲ. ಬಾಹುಬಲ ಎರಡು ಕಡೆ ಚಾಚಬೇಕು. ಒಂದು ಕಡೆ ಚಾಚಿದರೆ ತಪ್ಪಾಗುತ್ತೆ, ಅರ್ಥ ಮಾಡಿಕೊಳ್ಳಿ. ಎರಡು ಕಡೆ ಚಾಚಿದ್ರೆ ನಾನು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ದೇವಿ ನುಡಿದಿದ್ದಾಳೆ.
ನಾನು ನಿಮ್ಮ ಮನೆ ದೇವತೆ ಗೊತ್ತಾ. ನಾನು ನಿಮ್ಮ ಮೂಲದೇವರು. ಅವಕಾಶ ಸಿಕ್ಕಿದರೆ ಯಾವಾಗಾದರೂ ಬಂದು ನನ್ನ ಆಶೀರ್ವಾದ ತೆಗೆದುಕೊಂಡು ಹೋಗಲು ಹೇಳು ಎಂದು ದೇವಾಲಯದ ಅರ್ಚಕ ಡಾ.ಲಿಂಗಣ್ಣ ಅವರ ಮೈಮೇಲೆ ಬಂದ ದೇವಿ ಸೂಚನೆ ನೀಡಿದ್ದಾಳೆ.
ಸಿದ್ದರಾಮಯ್ಯ ಪುತ್ರ, ಶಾಸಕ ಯತೀಂದ್ರ ಸಿದ್ಧರಾಮಯ್ಯ ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಜೊತೆ ಕಳೆದ ವಾರ ಮಂಡ್ಯ ಜಿಲ್ಲೆಯ ಮಳವಳ್ಳಿಯ ಚೊಟ್ಟನಹಳ್ಳಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಯತೀಂದ್ರ ಸಿದ್ದರಾಮಯ್ಯ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದ್ದರು. ಈ ವೇಳೆ ಪೂಜಾರಿ ಮೈ ಮೇಲೆ ಬಂದ ಆದಿನಾಡು ಚಿಕ್ಕಮ್ಮ ದೇವಿ 'ಬಾಹುಬಲ ಎರಡು ಕಡೆ ಚಾಚಲೇ' ಎಂದು ಸಂದೇಶ ಕೊಟ್ಟಿದೆ. ಆದಿನಾಡು ಚಿಕ್ಕಮ್ಮ ದೇವಿ ಕೊಟ್ಟ ಸಂದೇಶ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸಿದ್ದರಾಮಯ್ಯ ಅವರನ್ನು ವಿವಿಧ ಕ್ಷೇತ್ರಗಳ ಅಭಿಮಾನಿಗಳು ತಮ್ಮ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವಂತೆ ಕೇಳಿಕೊಂಡಿದ್ದರೂ ಸಿದ್ದರಾಮಯ್ಯ ಅವರು ತಮ್ಮ ಕ್ಷೇತ್ರವನ್ನು ಅಂತಿಮಗೊಳಿಸಿರಲಿಲ್ಲ. ತಮ್ಮ ಯಾವುದು ಬೆಸ್ಟ್ ಎನ್ನುವ ಹುಡುಕಾಟದಲ್ಲೇ ಇದ್ದರು. ಈ ಸಮಯದಲ್ಲಿ ಬಿಜೆಪಿಯ ಕೆಲ ನಾಯಕರು ಸಿದ್ದರಾಮಯ್ಯ ಅವರನ್ನು ಗೇಲಿ ಮಾಡಿದ್ದೂ ಉಂಟು. ಆದರೆ ಇತ್ತೀಚೆಗೆ ಕೋಲಾರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಸಿ್ದರಾಮಯ್ಯ ಅವರು ಕೋಲಾರದಿಂದಲೇ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದರು.
ಆದರೆ ಇದೀಗ ಅವರ ಮನೆದೇವರು ಎರಡು ಕ್ಷೇತ್ರದಿಂದ ಸ್ಪರ್ಧಿಸುವಂತೆ ಸೂಚನೆ ನೀಡಿದ್ದು, ದೇವಿನುಡಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮೂಲ ಮನೆ ದೇವರ ಸೂಚನೆಯಂತೆ ಎರಡು ಕ್ಷೇತ್ರದಲ್ಲಿ ನಿಲ್ತಾರಾ ಸಿದ್ದು? ಚುನಾವಣೆಗೆ ಮೊದಲು ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸ್ತಾರಾ ಸಿದ್ದು? ಎಂಬ ಕುತೂಹಲ ಸೃಷ್ಟಿಸಿದೆ. ಒಂದು ವೇಳೆ ಎರಡು ಕ್ಷೇತ್ರಗಳಿಂದ ಸ್ಪರ್ಧೆಗೆ ನಿಂತರೆ ಇನ್ನೊಂದು ಕ್ಷೇತ್ರ ಯಾವುದಾಗಿರುತ್ತದೆ ಎನ್ನುವ ಪ್ರಶ್ನೆಯೂ ಸಿದ್ದು ಅಭಿಮಾನಿಗಳಲ್ಲಿ ಮೂಡಿದೆ.
ಕಳೆದ ಬಾರಿ ಸಿದ್ದರಾಮಯ್ಯ ಅವರು ಬಾದಾಮಿಯಿಂದ ಸ್ಪರ್ಧಿಸಿ ಗೆದ್ದಿದ್ದರು. ಬಾದಾಮಿಯಿಂದಲೇ ಸ್ಪರ್ಧಿಸಬೇಕು ಎಂದು ಬಾದಾಮಿ ಜನ ಪಟ್ಟು ಹಿಡಿದಿದ್ದರು. ಇದೀಗ ದೇವಿ ನುಡಿಯಂತೆ ಇನ್ನೊಂದು ಕ್ಷೇತ್ರವನ್ನು ಆರಿಸಿಕೊಳ್ಳುವುದಾದರೆ ಸಿದ್ದರಾಮಯ್ಯ ಬಾದಾಮಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರಾ? ಅಥವಾ ಇದಲ್ಲದೆ ರಾಜ್ಯದ ಹಲವು ಕ್ಷೇತ್ರಗಳ ಕಾಂಗ್ರೆಸ್ ನಾಯಕರು ತಮ್ಮ ಕ್ಷೇತ್ರವನ್ನು ಸಿದ್ದರಾಮಯ್ಯ ಅವರಿಗೆ ಬಿಟ್ಟುಕೊಡುವುದಾಗಿ ಹೇಳಿದ್ದರು. ಅವುಗಳಲ್ಲಿ ಯಾವುದಾದರೂ ಒಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರಾ? ಎನ್ನುವುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ:ಕೋಲಾರದಿಂದಲೇ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ ಸಿದ್ದರಾಮಯ್ಯ!