ಮಂಡ್ಯ :ಜಿಲ್ಲಾ ಹಾಲು ಒಕ್ಕೂಟದಲ್ಲಿ ಕಳೆದ 15 ವರ್ಷಗಳಿಂದ ಹಾಲಿಗೆ ನೀರನ್ನು ಸೇರಿಸಲಾಗುತ್ತಿದೆ. 10 ಸಾವಿರ ಕೋಟಿ ರೂ.ಗೂ ಹೆಚ್ಚು ಹಗರಣ ನಡೆದಿದೆ ಎಂದು ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಗಂಭೀರವಾಗಿ ಆರೋಪಿಸಿದರು. ನಗರದಲ್ಲಿ ಮಾತನಾಡಿದ ಅವರು, ಹಾಲಿಗೆ ನೀರು ಸೇರುತ್ತಿರುವ ಪರಿಣಾಮ ನಿತ್ಯ ಒಕ್ಕೂಟಕ್ಕೆ 15 ಲಕ್ಷ ರೂ. ನಷ್ಟ ಸಂಭವಿಸುತ್ತಿದೆ ಎಂದು ಮನ್‌ಮುಲ್‌ನ ಹಿರಿಯ ಅಧಿಕಾರಿಗಳು ನನಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಹೆಚ್ ಡಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ತನಿಖೆಯಾಗಬಾರದು ಅಂತ ಎಲ್ಲಿ ಹೇಳಿದ್ದಾರೆ? ಅವರೂ ಸಹ ಸಮಗ್ರ ತನಿಖೆ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ಈಗ ನಮ್ಮ ಸರ್ಕಾರ ಅಧಿಕಾರದಲ್ಲಿಲ್ಲ. ಬಿಜೆಪಿಯವರು ಸಿಬಿಐ ತನಿಖೆಗೆ ಒಪ್ಪಿಸಲಿ ಎಂದು ಸವಾಲು ಹಾಕಿದರು.
ಮಾಜಿ ಸಚಿವ ಚೆಲುವರಾಯಸ್ವಾಮಿ ಅವರು ನಮ್ಮ ಪಕ್ಷ ನಮ್ಮ ನಾಯಕರ ಬಗ್ಗೆ ಒಳ್ಳೆಯ ಮಾತುಗಳನ್ನಾಡಲು ಸಾಧ್ಯವೇ?. ರಾಜಕೀಯ ಲಾಭಕ್ಕಾಗಿ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ಹೆಸರನ್ನು ಬಳಕೆ ಮಾಡಿಕೊಂಡಿದ್ದಾರೆ. ಅವರಿಗೆ ಜಿಲ್ಲೆಯೊಳಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಅವರು ಆಡಿಯೋ ಅಸ್ತ್ರವನ್ನು ಪ್ರಯೋಗ ಮಾಡಿದ್ದಾರೆ. ಅವರು ರಾಜಕೀಯವಾಗಿ ಬೆಳೆದು ಬಂದ ಹಾದಿಯನ್ನೊಮ್ಮೆ ಹಿಂತಿರುಗಿ ನೋಡಲಿ ಎಂದು ಟಾಂಗ್ ನೀಡಿದರು.