ಮಂಡ್ಯ: ಪಾಳು ಬಿದ್ದಿದ್ದ ಪಾರ್ಕ್ ಈಗ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು, ಇದರ ಹಿಂದಿದೆ ಕಾಯಕಯೋಗಿ ಫೌಂಡೇಷನ್. ಮತ್ತೊಂದು ವಿಚಾರವೆಂದರೆ ಈ ಪಾರ್ಕ್‌ನಲ್ಲಿ ಗಿಡ ನೆಟ್ಟು ಶುಭ ಹಾರೈಸಿದ್ದು ಕೂಡ ಸ್ವತಃ ಶಿವಕುಮಾರ ಸ್ವಾಮೀಜಿಯರೇ ಆಗಿದ್ದಾರೆ.
ತ್ರಿವಿಧ ದಾಸೋಹಿ ಹೆಸರಲ್ಲಿ ನಳನಳಿಸುತ್ತಿದೆ ಹಚ್ಚ ಹಸಿರಿನ ಪಾರ್ಕ್ - ಮಂಡ್ಯದಲ್ಲಿ ಶಿವಕುಮಾರ ಸ್ವಾಮೀಜಿ ಪಾರ್ಕ್ ಅಭಿವೃದ್ಧಿ,
ಕಾವೇರಿ ಕೃಪೆಯಿಂದ ಹಸಿರಿನಿಂದ ಕಂಗೊಳಿಸುವ ಸಕ್ಕರೆ ಜಿಲ್ಲೆಯಲ್ಲಿ ತ್ರಿವಿಧ ದಾಸೋಹಿಯ ಹೆಸರಿನಲ್ಲಿಯೂ ಉದ್ಯಾನವನ ಕಂಗೊಳಿಸುತ್ತಿದೆ.
ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲಿರೋ ಶಿವಕುಮಾರ ಸ್ವಾಮೀಜಿ ಉದ್ಯಾನವನ ವಿಶ್ವ ಪರಿಸರ ದಿನದ ಕೊಡುಗೆ ಎಂದೇ ಹೇಳಬಹುದು. ಕಳೆದ 6 ವರ್ಷಗಳ ಹಿಂದೆ ಪಾಳು ಬಿದ್ದಿದ್ದ ಈ ಪಾರ್ಕ್ ಇಂದು ಹಸಿರಿನಿಂದ ನಳನಳಿಸುತ್ತಿದೆ.
ಕಾಯಕಯೋಗಿ ಫೌಂಡೇಷನ್‌ನ ಅಧ್ಯಕ್ಷ, ಪತ್ರಕರ್ತ ಶಿವಕುಮಾರ್ ಶ್ರಮದ ಫಲವಾಗಿ ಈ ಪಾರ್ಕ್ ಸುಂದರವಾಗಿ ಕಂಗೊಳಿಸುತ್ತಿದೆ. ನಗರಸಭೆಯಿಂದ 50 ವರ್ಷಗಳಿಗೆ ಲೀಸ್‌ಗೆ ಪಡೆದು ಈ ಪಾರ್ಕ್ ನಿರ್ವಹಣೆ ಮಾಡಲಾಗುತ್ತಿದೆ. ಸುಮಾರು ಎರಡೂವರೆ ಎಕರೆ ಪ್ರದೇಶದ ಈ ಪಾರ್ಕ್‌ನಲ್ಲಿ ವಿವಿಧ ಬಗೆಯ ಸಸ್ಯಗಳನ್ನು ಬೆಳೆಸಲಾಗುತ್ತಿದೆ. ಪ್ರತಿ ತಿಂಗಳು 20 ಸಾವಿರ ರೂಪಾಯಿಗೂ ಹೆಚ್ಚು ವೆಚ್ಚ ಮಾಡಿ ನಿರ್ವಹಣೆ ಮಾಡಲಾಗುತ್ತಿದೆ.