ಮಂಡ್ಯ:ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ವಾರ್ಡನ್ ಒಬ್ಬ ಬಾಲಕಿಯಾಗಿದ್ದ ಸಮಯದಿಂದಲೂ ಲೈಂಗಿಕವಾಗಿ ಬಳಸಿಕೊಂಡು ಯುವತಿಯಾದ ನಂತರದಲ್ಲಿ ಆಕೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು, ತದನಂತರ ಕೈಕೊಟ್ಟಿರುವ ಪ್ರಕರಣವೊಂದು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬೆಕ್ಕಳಲೆ ಗ್ರಾಮದ ಸತೀಶ್ ವಂಚಕ ಆರೋಪಿ. ಈತನ ತಾಯಿ, ಸ್ನೇಹಿತರಾದ ಪುಟ್ಟಸ್ವಾಮಿ, ಲೋಕೇಶ್ ವಿರುದ್ಧ ಮದ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ವೊಂದರ ವಾರ್ಡನ್ ಆಗಿರುವ ಸತೀಶ್ 2014ರಲ್ಲಿ 9ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯ ಹೆತ್ತವರನ್ನು ಪರಿಚಯ ಮಾಡಿಕೊಂಡು ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಬಾಲಕಿಯೊಂದಿಗೆ ಸಲುಗೆ ಬೆಳೆಸಿಕೊಂಡ ಸತೀಶ್ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತೇನೆಂದು ಭರವಸೆ ನೀಡಿದ್ದನಂತೆ.
ಲೈಂಗಿಕ ದೌರ್ಜನ್ಯ:ನಂತರದ ದಿನಗಳಲ್ಲಿ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ, ನೀನೂ ನನ್ನನ್ನು ಪ್ರೀತಿಸು ಎಂದು ವಿದ್ಯಾರ್ಥಿನಿಗೆ ಬಲವಂತಪಡಿಸಿದ್ದಾನಂತೆ. ಆದರೆ, ಬಾಲಕಿ ಇದಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ. ಬಳಿಕ ಬಾಲಕಿಯನ್ನು ಅರೆತಿಪ್ಪರು ಬೆಟ್ಟ, ರಾಮದೇವರ ಬೆಟ್ಟಕ್ಕೆ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಅಸಭ್ಯವಾಗಿ ವರ್ತಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ.
ನಂತರ ಒಂದು ದಿನ ಮನೆಯವರೆಲ್ಲ ಬೆಂಗಳೂರಿಗೆ ತೆರಳಿದ್ದ ವಿಷಯ ತಿಳಿದು ರಾತ್ರಿ 11 ಗಂಟೆಗೆ ಮನೆಗೆ ಬಂದು ಒಬ್ಬಂಟಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಆಗ ಬಾಲಕಿಗೆ 17 ವರ್ಷವಾಗಿತ್ತು. ತದನಂತರ 18 ವರ್ಷ ತುಂಬಿದ ಬಳಿಕ ತಾನೇ ಮದುವೆಯಾಗುತ್ತೇನೆಂದು ನಂಬಿಸಿದ್ದಲ್ಲದೆ, ಹಲವು ಸಲ ಮನೆಗೆ ಬಂದು ಬಂದು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.