ಮಂಡ್ಯ: ಕಿರುಗಾವಲು ಕೆರೆ ತುಂಬಿದರೆ 50 ಹಳ್ಳಿಗೆ ನೀರಾವರಿ ಸೌಭಾಗ್ಯ. ಇಲ್ಲವಾದರೇ ಹುಳ್ಳಿಯೇ ಗತಿ ಎಂಬ ಮಾತು ಮಳವಳ್ಳಿ ತಾಲೂಕಿನ ಜನರದ್ದು. ಅದರಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಎಡವಟ್ಟೋ ಅಥವಾ ಗ್ರಾಮ ಪಂಚಾಯತಿ ನಿರ್ಲಕ್ಷ್ಯದಿಂದಲೋ ನೀರಾವರಿ ಸೌಭಾಗ್ಯ ಸಿಗದೆ ರೈತರಿಗೆ ರೋಗ ಭಾಗ್ಯ ಕಟ್ಟಿಟ್ಟ ಬುತ್ತಿಯಾಗಿದೆ.
ಶಾಸಕರು ಮೂರು ಬಾರಿ ಗುದ್ದಲಿ ಪೂಜೆ ನೆರವೇರಿಸಿದ್ದರೂ ಈವರೆಗೂ ಇಲ್ಲಿನಕಿರುಗಾವಲು ಕೆರೆ ನಾಲೆ ದುರಸ್ತಿ ಕಾಮಗಾರಿ ಕೈಗೊಂಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಚರ್ಮರೋಗಕ್ಕೆ ರೈತರು ತುತ್ತಾಗುತ್ತಿದ್ದಾರೆ. ಇದಕ್ಕೆ ಕಾರಣ ಕಿರುಗಾವಲು ಪಟ್ಟಣದ ಕೊಳಚೆ ನೀರನ್ನು ಈ ನಾಲೆಗೆ ಬಿಟ್ಟಿರೋದು.
ಮಾಜಿ ಶಾಸಕ ನರೇಂದ್ರ ಸ್ವಾಮಿ, ಶಾಸಕ ಅನ್ನದಾನಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಸುಮಾರು 20 ಗ್ರಾಮಗಳ 1,500 ಹೆಕ್ಟೇರ್ ಪ್ರದೇಶಕ್ಕೆ ಈ ನಾಲೆಯಿಂದ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಕೊಳಚೆ ನೀರು ಸೇರುತ್ತಿರುವುದರಿಂದ ತಾಲೂಕಿನ ಕಿರುಗಾವಲು ಕೆರೆ ಅಚ್ಚುಕಟ್ಟು ಪ್ರದೇಶದ ರೈತರು ಕೃಷಿ ಜಮೀನಿಗೆ ಇಳಿಯಲು ಭಯಪಡುತ್ತಿದ್ದಾರೆ.
ಕಿರುಗಾವಲು ಕೆರೆ ನಾಲೆ ದುರಸ್ತಿ ಏಕಿಲ್ಲ? ಜನರ ಪ್ರಶ್ನೆ ವಿಸಿ ನಾಲೆಗೆ ನೀರು ಹರಿಸಿದರೆ ಕೆರೆ ತುಂಬಿ ಕೃಷಿ ಚಟುವಟಿಕೆಗೆ ನೀರು ಬಿಡಲಾಗುತ್ತದೆ. ಆದರೂ ಈ ಕಡೆ ಗಮನಹರಿಸದ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ನಾಲೆಯಲ್ಲಿ ಬೆಳೆದು ನಿಂತಿರುವ ಗಿಡಗಳನ್ನು ತೆರವುಗೊಳಿಸಿ, ನಾಲೆಗೆ ಸೇರುತ್ತಿರುವ ಕೊಳಚೆ ನೀರನ್ನು ತಡೆಗಟ್ಟಬೇಕಾಗಿದೆ ಎಂದು ರೈತರು ಒತ್ತಾಯಿಸಿದ್ದಾರೆ.