ಮಂಡ್ಯ: ಐತಿಹಾಸಿಕ ಕೆ.ಆರ್.ಎಸ್ ಡ್ಯಾಂ ಸೇಫ್ಟಿ ದೃಷ್ಟಿಯಿಂದ ಹಿನ್ನೀರು ಪ್ರದೇಶವನ್ನ ನಿರ್ಬಂಧಿತ ಪ್ರದೇಶ ಎಂದು ಘೋಷಿಸಲಾಗಿದೆ. ಆದರೆ, ಜಲ ಸಂಪನ್ಮೂಲ ಇಲಾಖೆಯೇ ಇದೀಗ ನಿಯಮ ಉಲ್ಲಂಘನೆ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ. ಡ್ಯಾಂನಿಂದ ಕೇವಲ 700 ಮೀಟರ್ ದೂರದಲ್ಲಿ ಸೈಲಿಂಗ್ ಸ್ಪರ್ಧೆ ಆಯೋಜನೆಗೆ ಅವಕಾಶ ನೀಡಲಾಗಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಡ್ಯಾಂನ 700 ಮೀಟರ್ ದೂರದಲ್ಲೇ ಮೈಸೂರಿನ ರಾಯಲ್ ಸೈಲಿಂಗ್ ಕ್ಲಬ್ಗೆ ಸೈಲಿಂಗ್ ಚಟುವಟಿಕೆ ನಡೆಸಲು ಅನುಮತಿ ನೀಡಿದೆ. ಅದರಂತೆ ನಿನ್ನೆಯಿಂದ ಐದು ದಿನಗಳ ಕಾಲ ನ್ಯಾಷನಲ್ ಸೈಲಿಂಗ್ ಸ್ಪರ್ಧೆ ಆಯೋಜಿಸಿದ್ದು, ಇದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಲ ಸಂಪನ್ಮೂಲ ಇಲಾಖೆ ಅನುಮತಿ ನೀಡುವಾಗ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಅಗ್ನಶಾಮಕ ದಳ, ಆರೋಗ್ಯ ಇಲಾಖೆಯಿಂದಲೂ ಒಪ್ಪಿಗೆ ಪತ್ರ ಪಡೆಯುವಂತೆ ಷರತ್ತು ವಿಧಿಸಿದೆ. ಷರತ್ತುಗಳನ್ನ ಪಾಲಿಸದೆ ಸ್ಪರ್ಧೆ ಆಯೋಜಿಸಿದ್ದು, ಈ ಬಗ್ಗೆ ನೀರಾವರಿ ನಿಗಮದ ಅಧಿಕಾರಿ ಸುರೇಶ್ ಬಾಬು ಪ್ರಶ್ನಿಸಿದಾಗ ಆಯೋಜಕ ಅರವಿಂದ್ ಶರ್ಮಾ ಎಂಬುವರು ಉದ್ಧಟತನದಿಂದ ವರ್ತಿಸಿ, ನಿಮ್ಮ ಕಚೇರಿಗೆ ಒಪ್ಪಿಗೆ ಪತ್ರ ಕಳುಹಿಸಿದ್ದೇನೆ ಎಂದು ಅಧಿಕಾರಿಯನ್ನು ವಾಪಸ್ ಕಳುಹಿಸಿದ್ದಾರೆ.