ಮಂಡ್ಯ: 2019ರ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ನಾಯಕರ ಆಶೀರ್ವಾದ ನಮ್ಮ ಮೇಲಿತ್ತು ಎಂದು ಹೇಳುವ ಮೂಲಕ ಸುಮಲತಾ ಅಂಬರೀಶ್ ಬೆಂಬಲಿಗ ಸಚ್ಚಿದಾನಂದ ಪರೋಕ್ಷವಾಗಿ ಮೈತ್ರಿ ಪಕ್ಷದ ಕೆಲವು ನಾಯಕರು ಸುಮಲತಾಗೆ ಬೆಂಬಲ ಸೂಚಿಸಿರುವುದನ್ನು ಬಾಯಿ ಬಿಟ್ಟಿದ್ದಾರೆ.
ಮೇ 23ರ ಫಲಿತಾಂಶ ಒಳ್ಳೆಯದಾಗುತ್ತೆ. ಮಂಡ್ಯದ ಜನ ಜಿಲ್ಲೆಯ ಘನತೆ, ಸ್ವಾಭಿಮಾನವನ್ನು ಎತ್ತಿ ಹಿಡಿಯುತ್ತಾರೆ. ಅಂಬರೀಷ್ ಕುಟುಂಬದ ಪರ ಜಿಲ್ಲೆಯ ಜನ ಇದ್ದೀವಿ ಅಂತ ತೋರಿಸುತ್ತಾರೆ ಎಂದ ಅವರು ಕಾಂಗ್ರೆಸ್ನ ರೆಬೆಲ್ ನಾಯಕರು ಕೂಡ ಸುಮಲತಾ ಬೆನ್ನಿಗೆ ನಿಂತಿದ್ದ ವಿಷಯ ಬಯಲು ಮಾಡಿದ್ದಾರೆ.
ಮಂಡ್ಯದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿಗಳು ಸುಮಲತಾ ಪರ ಕೆಲಸ ಮಾಡಿದ್ರು ಜೊತೆಗೆ ಅವರ ಬೆಂಬಲಿಗರು 100ಕ್ಕೆ 100ರಷ್ಟು ಸುಮಲತಾ ಪರ ಕೆಲಸ ಮಾಡಿದ್ದಾರೆ. ಬೆಂಬಲಿಗರು ಕೆಲಸ ಮಾಡಿದ್ದಾರೆ ಅಂದ ಮೇಲೆ ಅವರ ಪಕ್ಷದ ನಾಯಕರಿಗೆ ಈ ವಿಷಯ ಗೊತ್ತಿರಲೇಬೇಕಲ್ಲವೇ ಎಂದು ಸಚ್ಚಿದಾನಂದ ಪ್ರಶ್ನಿಸಿದ್ದಾರೆ.
ಸುಮಲತಾ ಅಂಬರೀಶ್ ಬೆಂಬಲಿಗ ಸಚ್ಚಿದಾನಂದ ಇನ್ನು ಅದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ ಸತ್ಯಕ್ಕೆ ಜಯ ಎಂದರು. ನನ್ನ ಹಾದಿಯಾಗಿ ಸಹಸ್ರಾರು ಕಾರ್ಯಕರ್ತರು ಚುನಾವಣೆಯಲ್ಲಿ ಕೆಲಸ ಮಾಡಬೇಕು ಅಂದ್ರೆ ನಮಗೊಬ್ಬರು ನಾಯಕರಿರುತ್ತಾರೆ. ಅವ್ರ ಗಮನಕ್ಕೆ ತಂದೇ ನಾವು ಈ ಚುನಾವಣೆ ಮಾಡಿರೋದು. ಮಾಧ್ಯಮಗಳಲ್ಲಿ ಏನಾದ್ರೂ ಹೇಳಲಿ, ಪಕ್ಷದ ವೇದಿಕೆಯಲ್ಲಿ ಏನಾದ್ರೂ ಚರ್ಚೆಯಾಗಲಿ. ಈ ಬಾರಿ ಸುಭದ್ರವಾದ ಚುನಾವಣೆ ನಡೆಸಿದ್ದೇವೆ. ಜನ ನಮ್ಮ ಜೊತೆ ಇದ್ದರು ಎಂದರು. ನೀವು ಹೇಳಿದ ನಾಯಕರೂ ನಮ್ಮ ಪರ ಇದ್ರು ಎಂದಿದ್ದಾರೆ ಸಚ್ಚಿದಾನಂದ.