ಮಂಡ್ಯ :ಮಂಡ್ಯದಲ್ಲಿ ಸೇಡಿನ ರಾಜಕಾರಣ ಹೊಸದೇನಲ್ಲ. ಸೇಡಿನ ರಾಜಕಾರಣವನ್ನು ನಾನು ಎದುರಿಸುತ್ತೇನೆ. ನನಗೆ ಯಾವುದೇ ಭಯವಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ. ಮಂಡ್ಯ ತಾಲೂಕಿನ ಗೌಡಗೆರೆ ಗ್ರಾಮದಲ್ಲಿ ದೇವಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ವೇದಿಕೆ ಹತ್ತಲು ನಡೆದ ಗಲಾಟೆ ವಿಚಾರವಾಗಿ ಮಾತನಾಡಿದ ಅವರು, ’’ಈ ರೀತಿ ಆಗುತ್ತದೆ ಎಂದು ನನಗೆ ಗೊತ್ತಿರಲಿಲ್ಲ. ಈ ರೀತಿಯ ಗೊಂದಲಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ. ಯಾರ್ಯಾರು ಪ್ಲೆಕ್ಸ್ ಹಾಕಿದ್ದಾರೆ ಎಂಬ ಬಗ್ಗೆ ನಾನು ಯೋಚನೆ ಮಾಡಲ್ಲ. ಅಷ್ಟು ತಳಮಟ್ಟಕ್ಕೆ ನಾನು ಇದುವರೆಗೂ ಹೋಗಿಲ್ಲ. ಅಂತಹ ರಾಜಕಾರಣವನ್ನೂ ನಾನು ಮಾಡಲ್ಲ. ಚುನಾವಣೆ ಹತ್ತಿರ ಬಂದಿರುವುದರಿಂದ ಈ ರೀತಿಯ ಗೊಂದಲಗಳನ್ನು ಮಾಡಲಾಗುತ್ತಿದೆ. ಅಲ್ಲಿ ಗಲಾಟೆ ಯಾರು ಮಾಡಿದರು ಎಂಬುದು ನನಗೆ ಗೊತ್ತಿಲ್ಲ, ಅದನ್ನು ಕೇಳುವುದಕ್ಕೂ ಹೋಗುವುದಿಲ್ಲ‘‘ ಎಂದು ಹೇಳಿದರು.
ಮಂಡ್ಯದಲ್ಲಿ ಸೇಡಿನ ರಾಜಕಾರಣ ಹೊಸದೇನಲ್ಲ :ಮಂಡ್ಯದಲ್ಲಿ ಸೇಡಿನ ರಾಜಕಾರಣ ಹೊಸದೇನಲ್ಲ. ಲೋಕಸಭಾ ಚುನಾವಣೆಯಿಂದ ಆರಂಭವಾದ ಈ ರಾಜಕಾರಣ ಇಲ್ಲಿಯವರೆಗೂ ಬಂದು ನಿಂತಿದೆ. ಅದು ಇವತ್ತಿನವರೆಗೆ ನಡೆದುಕೊಂಡೇ ಹೋಗುತ್ತಿದೆ. ಇಂತಹ ರಾಜಕಾರಣವನ್ನು ನಾನು ಧೈರ್ಯವಾಗಿಯೇ ಎದುರಿಸುತ್ತೇನೆ. ನನಗೆ ಈ ಬಗ್ಗೆ ಭಯವೇನೂ ಇಲ್ಲ. ಇನ್ನು ಸೇಡಿನ ರಾಜಕಾರಣ ಎಷ್ಟು ದಿನ ನಡೆಯುತ್ತದೆ. ಜನರು ಎಷ್ಟು ದಿನ ಸಹಿಸಿಕೊಳ್ಳುತ್ತಾರೆ.? ಅಭಿವೃದ್ದಿ ಕಾರ್ಯಗಳನ್ನು ತಡೆಯಲು ಮಾಡುತ್ತಿರುವ ಕೆಲಸಗಳಿವು. ಬೋರ್ಡ್ ನೋಡಿ, ಫ್ಲೆಕ್ಸ್ ನೋಡಿ ಎಂದು ಹೇಳುತ್ತಾರೆ. ಅದನ್ನು ಬಿಟ್ಟು ರೋಡ್ ನೋಡಿ ಅಂದಿದ್ದರೆ ನನಗೆ ಖುಷಿ ಆಗುತ್ತಿತ್ತು ಎಂದು ಕಾರ್ಯಕ್ರಮದ ವೇಳೆ ನಡೆದ ಗಲಾಟೆ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ ಸಂಸದೆ ಸುಮಲತಾ ಈ ಮಾತುಗಳನ್ನು ಆಡಿದರು.
ರಾಜಕಾರಣದಲ್ಲಿ ಬದಲಾವಣೆ ಬರಬೇಕು :ನಮ್ಮ ಜಿಲ್ಲೆಯ ರಾಜಕಾರಣದಲ್ಲಿ ಬದಲಾವಣೆ ಬರಲೇಬೇಕು. ಹೋದಲೆಲ್ಲ ಜೆಡಿಎಸ್ ನವರೇ ಗಲಾಟೆ ಮಾಡುತ್ತಿದ್ದಾರೆ. ಅವರಿಗೆ ಕಳೆದ ಲೋಕಸಭಾ ಚುನಾವಣೆಯ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಜನ ಒಮ್ಮೆ ಪಾಠ ಕಲಿಸಿದ ಮೇಲೆ ಕಲಿತುಕೊಳ್ಳಬೇಕಿತ್ತು. ಆದರೂ ಈ ಬಗ್ಗೆ ಪಾಠ ಕಲಿಯದೇ ಮತ್ತೂ ಅದನ್ನೆ ಮಾಡಿಕೊಂಡು ಹೋದರೆ ಜನ ಒಪ್ಪಲ್ಲ ಎಂಬುದನ್ನು ತಿಳಿದುಕೊಳ್ಳಬೇಕು. ಅಷ್ಟು ತಿಳಿವಳಿಕೆ ಇಲ್ಲ ಎಂದರೇ ದೇವರೇ ಗತಿ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅಸಮಾಧಾನ ವ್ಯಕ್ತಪಡಿಸಿದರು.