ಮಂಡ್ಯ: ಕಾವೇರಿ ನದಿಯಲ್ಲಿ ಬಿದ್ದು ಯುವಕನೋರ್ವ ಕೊಚ್ಚಿ ಹೋದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಶ್ರೀರಂಗಪಟ್ಟಣ ತಾಲೂಕು ಆಡಳಿತ ಕಾವೇರಿ ನದಿ ತೀರಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ ವಿಧಿಸುವ ಮೂಲಕ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.
ರಾಜ್ಯದಲ್ಲಿ ಎಡಬಿಡದೇ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಅಣೆಕಟ್ಟುಗಳು ತುಂಬಿ ತುಳುಕುತ್ತಿವೆ. ಇದರಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಕೆಆರ್ಎಸ್ ಕೂಡ ಒಂದು. ನೀರಿನ ಮಟ್ಟ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಡ್ಯಾಂನಿಂದ ನದಿಗೆ ನೀರು ಹರಿಬಿಡಲಾಗಿದೆ. ಪರಿಣಾಮ ಕಾವೇರಿ ತೀರ ಪ್ರದೇಶದಲ್ಲಿ ಪ್ರವಾಹದ ಪರಿಸ್ಥಿತಿ ಎದುರಾಗಿದೆ.
ಆದೇಶ ಹೊರಡಿಸಿದ ಶ್ರೀರಂಗಪಟ್ಟಣ ತಾಲೂಕು ಆಡಳಿತ ನಿನ್ನೆ (ಜುಲೈ 13) ಬೆಳಗ್ಗೆ ಕಾಲು ಜಾರಿ ನದಿಯಲ್ಲಿ ಬಿದ್ದು ಬೆಂಗಳೂರಿನ ಯಲಹಂಕ ಮೂಲದ ಅಶೋಕ್ (26) ಎಂಬಾತ ಕೊಚ್ಚಿ ಹೋಗಿದ್ದಾರೆ. ಅಶೋಕ್ ತನ್ನ ಕುಟುಂಬಸ್ಥರು ಮತ್ತು ಸ್ನೇಹಿತರೊಂದಿಗೆ ಸಂಗಮಕ್ಕೆ ಬಂದಿದ್ದರು. ಪೂಜೆಗೂ ಮುನ್ನ ನದಿಯಲ್ಲಿ ಕಾಲು ತೊಳೆಯುವ ವೇಳೆ ಕಾಲು ಜಾರಿ ಬಿದ್ದು ದುರ್ಘಟನೆ ಸಂಭವಿಸಿದೆ.
ಘಟನೆ ಬಳಿಕ ಎಚ್ಚೆತ್ತುಕೊಂಡಿರುವ ತಾಲೂಕು ಆಡಳಿತ, ಪ್ರವಾಸಿಗರಿಗೆ ನಿರ್ಬಂಧ ಹೇರಿದೆ. ನದಿಯಲ್ಲಿ ಅಸ್ತಿ ಬಿಡುವುದಕ್ಕೂ ನಿರ್ಬಂಧ ವಿಧಿಸಿ, ಶ್ರೀರಂಗಪಟ್ಟಣ ತಹಶೀಲ್ದಾರ್ ಶ್ವೇತಾ ರವೀಂದ್ರ ಆದೇಶ ಹೊರಡಿಸಿದ್ದಾರೆ. ಪ್ರವಾಸಿ ಸ್ಥಳಗಳಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸರನ್ನು ನಿಯೋಜಿಸಲಾಗಿದೆ. ಸಂಗಮ ರಸ್ತೆಯನ್ನೇ ಬಂದ್ ಮಾಡಲಾಗಿದ್ದು, ಪ್ರವಾಸಿಗರನ್ನು ಬ್ಯಾರಿಕೇಡ್ ಬಳಿಯೇ ತಡೆದು ವಾಪಸ್ ಕಳುಹಿಸಲಾಗುತ್ತಿದೆ.
ಇದನ್ನೂ ಓದಿ:ಕೆಆರ್ಎಸ್ ಬಳಿ ಕಾವೇರಿ ನದಿಗೆ ಹಾರಿದ ಮೈಸೂರಿನ ವಿದ್ಯಾರ್ಥಿ