ಮಂಡ್ಯ:ಸಕ್ಕರೆ ನಾಡು ಮಂಡ್ಯದಲ್ಲೂ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಬಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟವಾಗಿದೆ. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳಲು ರೆಸಾರ್ಟ್ ರಾಜಕಾರಣದ ಅಸ್ತ್ರ ಬಳಸುತ್ತಿದ್ದಾರೆ.
ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಕಸರತ್ತು: ಮಂಡ್ಯದಲ್ಲೂ ರೆಸಾರ್ಟ್ ಪಾಲಿಟಿಕ್ಸ್
ಮಂಡ್ಯದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಸದಸ್ಯರನ್ನು ರೆಸಾರ್ಟ್ಗೆ ಕರೆದೊಯ್ಯುತ್ತಿದ್ದು, ವಿವಿಧ ಪ್ರದೇಶಗಳಿಗೆ ಟೂರ್‌ಗೆ ಮಾಡಿಸುತ್ತಿದ್ದಾರೆ ಎಂದು ಜನಸಾಮಾನ್ಯರು ಆರೋಪಿಸುತ್ತಿದ್ದಾರೆ.
ಮೀಸಲಾತಿ ಪಟ್ಟಿ ನಿಗದಿಯಾದ ತಕ್ಷಣ ರಾಜಕೀಯ ಚಟುವಟಿಕೆಗಳು ಮತ್ತೆ ಆರಂಭಗೊಂಡು ಈಗಾಗಲೇ ಕೆಲವು ಗ್ರಾಪಂ.ಗಳಲ್ಲಿ ಸದಸ್ಯರನ್ನು ಒಲಿಸಿಕೊಳ್ಳಲು ರೆಸಾರ್ಟ್ ರಾಜಕಾರಣ ಆರಂಭವಾಗಿದೆ ಎನ್ನುತ್ತಾರೆ ಗ್ರಾಪಂ ಮಾಜಿ ಸದಸ್ಯ ಸಿದ್ದರಾಜು.
ಮಹಿಳೆಯರಿಗೆ ಸಿಂಹಪಾಲು:ಜಿಲ್ಲೆಯ ಒಟ್ಟು 233 ಗ್ರಾಮ ಪಂಚಾಯಿತಿಗಳಲ್ಲಿ 118 ಪಂಚಾಯಿತಿಗಳಲ್ಲಿ ಅಧ್ಯಕ್ಷ– ಉಪಾಧ್ಯಕ್ಷ ಹುದ್ದೆಯನ್ನು ಮಹಿಳೆಗೆ ಮೀಸಲುಗೊಳಿಸುವಂತೆ ಚುನಾವಣಾ ಆಯೋಗ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಪರಿಶಿಷ್ಟ ಜಾತಿಗೆ 35 ಸ್ಥಾನ, ಅದರಲ್ಲಿ 19 ಸ್ಥಾನ ಮಹಿಳೆಗೆ ನಿಗದಿ ಮಾಡಲು ಸೂಚಿಸಲಾಗಿದೆ. ಪರಿಶಿಷ್ಟ ಪಂಗಡಕ್ಕೆ 2 ಸ್ಥಾನ ನಿಗದಿಗೊಂಡಿದ್ದು ಎರಡೂ ಮಹಿಳೆಯ ಪಾಲಾಗಿವೆ.
ಹಿಂದುಳಿದ ಎ ವರ್ಗಕ್ಕೆ 58 ಸ್ಥಾನ, ಮಹಿಳೆಗೆ 31, ಹಿಂದುಳಿದ ಬಿ ವರ್ಗಕ್ಕೆ 15 ಸ್ಥಾನ, 8 ಮಹಿಳೆಯರಿಗೆ ನಿಗದಿಗೊಳಿಸುವಂತೆ ಸೂಚಿಸಲಾಗಿದೆ. ಸಾಮಾನ್ಯ ವರ್ಗಕ್ಕೆ 123 ಗ್ರಾಮ ಪಂಚಾಯಿತಿ ದಕ್ಕಿದ್ದು ಅದರಲ್ಲಿ 58 ಸ್ಥಾನ ಮಹಿಳೆಯರ ಪಾಲಾಗಿವೆ.
ನೂತನ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಅವರ ಬೆಂಬಲಿಗರು ಆಯಾ ತಾಲೂಕುಗಳ ಶಾಸಕರನ್ನು ಭೇಟಿ ಮಾಡಿ ತಮಗೆ ಬೇಕಾದ ಮೀಸಲಾತಿ ನಿಗದಿ ಮಾಡಿಸಿಕೊಡುವಂತೆ ಒತ್ತಡ ಹಾಕುತ್ತಿದ್ದಾರೆ. ಜಿಲ್ಲೆಯ ಎಲ್ಲಾ ಶಾಸಕರಿಗೂ ಇದು ದೊಡ್ಡ ತಲೆ ನೋವಾಗಿದೆ. ವಿವಿಧ ಸಮುದಾಯಗಳ ಮುಖಂಡರು ಮನವಿ ಸಲ್ಲಿಸಿ ತಮ್ಮ ಸಮುದಾಯಕ್ಕೆ ಅವಕಾಶ ನೀಡುವಂತೆ ಮನವಿ ಮಾಡುತ್ತಿದ್ದಾರೆ.
ಇತ್ತೀಚೆಗೆ ನಡೆದ ನಗರಸಭೆ ಅಧ್ಯಕ್ಷ– ಉಪಾಧ್ಯಕ್ಷ ಚುನಾವಣೆಯೂ ರೆಸಾರ್ಟ್ ರಾಜಕಾರಣಕ್ಕೆ ಸಾಕ್ಷಿಯಾಗಿತ್ತು. ಈಗ ಗ್ರಾಮ ಪಂಚಾಯಿತಿ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿದೆ. ಇವರನ್ನೂ ಮತ ಹಾಕಿ ಗೆಲ್ಲಿಸಿದ್ದು, ಗ್ರಾಮಗಳನ್ನು ಅಭಿವೃದ್ಧಿ ಪಡಿಸಲಿ ಅಂತ ರೆಸಾರ್ಟ್ ಗಳಿಗೆ ತೆರಳಿ ಮಜಾ ಮಾಡಲಿ ಅಂತಾ ಅಲ್ಲ ಅಂತ ರೆಸಾರ್ಟ್ ರಾಜಕಾರಣದ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.