ಮಂಡ್ಯ: ಜಿಲ್ಲೆಯಲ್ಲೂ ರೆಮ್ಡಿಸಿವಿರ್ ಚುಚ್ಚುಮದ್ದು ಕಾಳ ಸಂತೆಯಲ್ಲಿ ಮಾರಾಟವಾಗುತ್ತಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಜಿಲ್ಲೆಯ ನಾಗಮಂಗಲ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯೇ ಅಕ್ರಮ ದಂಧೆಯ ಹಾಟ್ ಸ್ಪಾಟ್ ಆಗಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ರೋಗಿಗಳಿಗೆ ಹಾಕುವ ರೆಮ್ಡಿಸಿವಿರ್ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದು, ಸೋಂಕಿತನ ಕುಟುಂಬ ಸದಸ್ಯನಿಂದ ವೈದ್ಯರ ರೆಮ್ಡಿಸಿವಿರ್ ಇಂಜೆಕ್ಷನ್ ದಂಧೆ ಬಯಲಾಗಿದೆ ಎನ್ನಲಾಗ್ತಿದೆ.
ಸೋಂಕಿತನಿಗೆ 3 ದಿನಗಳಿಂದ ಇಂಜೆಕ್ಷನ್ ಹಾಕಿರುವುದಾಗಿ ರಿಜಿಸ್ಟರ್ನಲ್ಲಿ ಆಸ್ಪತ್ರೆ ಸಿಬ್ಬಂದಿ ಎಂಟ್ರಿ ಮಾಡಿದ್ದಾರೆ. ಆದ್ರೆ 3 ದಿನಗಳಿಂದ ಯಾವುದೇ ಇಂಜೆಕ್ಷನ್ ಕೊಟ್ಟಿಲ್ಲವೆಂದು ಸಾರ್ವಜನಿಕ ಆಸ್ಪತ್ರೆ ವೈದ್ಯ ಡಾ. ತ್ಯಾಗರಾಜ್ ವಿರುದ್ಧ ಸೋಂಕಿತರ ಸಂಬಂಧಿವೋರ್ವ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನು ಸೋಂಕಿತ ವ್ಯಕ್ತಿಯ ಸಂಬಂಧಿಕ ಪ್ರಶ್ನಿಸಿದಕ್ಕೆ ವೈದ್ಯ ಆಕ್ರೋಶಗೊಂಡಿದ್ದಾನೆ. ಈ ವಿಚಾರವಾಗಿ ಆಸ್ಪತ್ರೆಯಲ್ಲಿ ಸೋಂಕಿತನ ಸಂಬಂಧಿಕ ರಂಪಾಟ ಮಾಡಿದ್ದಾನೆ. ಈ ವೇಳೆ ಆತನಿಗೆ ಇಂಜೆಕ್ಷನ್ ಕೊಟ್ಟಿದ್ದೇನೆಂದು ಹೇಳಿದ್ದ ವೈದ್ಯ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಸೋಂಕಿತ ವ್ಯಕ್ತಿ ವೈದ್ಯರ ಮುಂದೆಯೇ ಇಂಜೆಕ್ಷನ್ ಕೊಟ್ಟಿಲ್ಲವೆಂದು ಹೇಳಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಪೊಲೀಸರು ಆಗಮಿಸಿದ್ದಾರೆ.