ಮಂಡ್ಯ ಲೋಕಸಭೆ ಚುನಾವಣಾ ಫಲಿತಾಂಶದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆಲುವಿನ ನಗೆ ಬೀರಿದ್ದಾರೆ. ಅಲ್ಲದೆ ರಾಜ್ಯದಲ್ಲೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸಂಸತ್ ಪ್ರವೇಶಿಸಿದ ಮೊದಲ ಮಹಿಳೆ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ ಸುಮಲತಾ.
ಸುಮಲತಾ ಗೆಲುವು: ಕೇಶಮುಂಡನ ಮಾಡಿಸಿ ಹರಕೆ ತೀರಿಸಿದ ಅಂಬರೀಶ್ ಸೋದರ ಸಂಬಂಧಿ - undefined
ಸುಮಲತಾ ಅಂಬರೀಶ್ ಗೆದ್ದರೆ ಕೇಶಮುಂಡನ ಮಾಡಿಸುವುದಾಗಿ ಹರಕೆ ಹೊತ್ತಿದ್ದ ರೆಬಲ್ ಸ್ಟಾರ್ ಅಂಬರೀಶ್ ಸೋದರ ಸಂಬಂಧಿಯೊಬ್ಬರು ಇಂದು ಅಂಬಿ ಸಮಾಧಿ ಬಳಿ ಪೂಜೆ ಸಲ್ಲಿಸಿ ಕೇಶಮುಂಡನ ಮಾಡಿಸಿ ಹರಕೆ ತೀರಿಸಿದ್ದಾರೆ.
ಇನ್ನು ಸುಮಲತಾ ಗೆಲುವಿಗಾಗಿ ದೇವರಿಗೆ ಹರಕೆ ಹೊತ್ತಿದ್ದವರು ನಿನ್ನೆ ಪೂಜೆ, ಉರುಳುಸೇವೆ ಮಾಡುವ ಮೂಲಕ ಹರಕೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ ರೆಬಲ್ ಸ್ಟಾರ್ ಅಂಬರೀಶ್ ಅವರ ಸೋದರ ಸಂಬಂಧಿ ದೊಡ್ಡ ಅರಸಿಕೆರೆಯ ಅಕ್ಷಯ್ ಎಂಬ ಯುವಕ ಸುಮಲತಾ ಅವರು ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ಘೋಷಿಸಿದಾಗಲೇ, ಅವರು ಗೆದ್ದರೆ ಕೇಶಮುಂಡನ ಮಾಡಿಸುವುದಾಗಿ ದೇವರಲ್ಲಿ ಹರಕೆ ಹೊತ್ತಿದ್ದರು. ನುಡಿದಂತೆ ನಡೆದ ಅಕ್ಷಯ್ ಇಂದು ಕೇಶಮುಂಡನ ಮಾಡಿಸಿದ್ದಾರೆ.
ಮಂಡ್ಯದಿಂದ ಬೆಂಗಳೂರಿಗೆ ಅಂಬರೀಶ್ ಸಮಾಧಿ ಬಳಿ ಬಂದ ಅಕ್ಷಯ್ ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿ ಸಮಾಧಿ ಬಳಿಯೇ ಕೇಶಮುಂಡನ ಮಾಡಿಸಿಕೊಂಡಿದ್ದಾರೆ. ಇನ್ನು ಹರಕೆ ವಿಚಾರವನ್ನು ಯಾರಿಗೂ ಹೇಳದ ಅಕ್ಷಯ್ ಮನೆಯವರು ಎಷ್ಟೇ ಬಲವಂತ ಮಾಡಿದರೂ 3-4 ತಿಂಗಳಿಂದ ಕೂದಲನ್ನು ಬಿಟ್ಟಿದ್ದು ಇಂದು ಕೇಶಮುಂಡನ ಮಾಡಿಸಿದ್ದಾರೆ. ಗೆಲುವಿಗೆ ಕಾರಣರಾದ ಮಂಡ್ಯದ ಜನತೆಗೆ ಅಕ್ಷಯ್ ಧನ್ಯವಾದ ತಿಳಿಸಿದ್ದಾರೆ.