ಮಂಡ್ಯ:ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಹಲವು ಗುದ್ದಲಿ ಪೂಜೆ ನಡೆದಿದ್ದವು. ಅದೇ ರೀತಿ, ಬಿಜೆಪಿ ಸರ್ಕಾರದಲ್ಲೂ ನಡೆಯುತ್ತಿವೆ ಎಂದು ಗ್ರಾಮಸ್ಥರು ಹಾಗೂ ಶಾಸಕರ ಬೆಂಬಲಿಗರ ನಡುವೆ ಗುದ್ದಲಿ ಪೂಜೆ ವಿಚಾರವಾಗಿ ವಾಕ್ ಸಮರವೇ ನಡೆದಿದೆ.
ಹೌದು, ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿಗಾಗಿ ಶಾಸಕ ರವೀಂದ್ರ ಶ್ರೀಕಂಠಯ್ಯ ಗುದ್ದಲಿ ಪೂಜೆ ಹಮ್ಮಿಕೊಂಡಿದ್ದರು. ಈ ಗ್ರಾಮ, ಶಾಸಕರ ತವರು ಗ್ರಾಮ ಕೂಡ ಹೌದು. ರಸ್ತೆ ಅಗಲೀಕರಣದ ಅಭಿವೃದ್ದಿ ಕಾಮಗಾರಿಗೆ ₹10 ಕೋಟಿ ಅನುದಾನ ಬಿಡುಗಡೆ ಮಾಡಿಸಿಕೊಂಡು ಇಂದು ಗುದ್ದಲಿ ಪೂಜೆಯನ್ನು ಹಮ್ಮಿಕೊಂಡಿದ್ರು. ಇನ್ನೇನು ಶಾಸಕರು ಗುದ್ದಲಿಪೂಜೆ ಮಾಡಬೇಕೆನ್ನುವಷ್ಟರಲ್ಲಿ ಊರಿನ ಹಲವು ಗ್ರಾಮಸ್ಥರು ಕಾಮಗಾರಿ ನಡೆಸದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ರು. ರಸ್ತೆ ಅಗಲೀಕರಣದಿಂದ ತಮ್ಮ ಮನೆಗಳು ಹೋಗಲಿದ್ದು, ಮೊದ್ಲು ನಮಗೆ ಪರಿಹಾರ ಕೊಡಿಸಿ ಅಂತಾ ತರಾಟೆಗೆ ತೆಗೆದುಕೊಂಡ್ರು. ಸ್ಥಳಕ್ಕೆ ಬಂದ ಶಾಸಕ ರವೀಂದ್ರ ಶ್ರೀಕಂಠಯ್ಯ ಗ್ರಾಮಸ್ಥರನ್ನು ಮನವೊಲಿಸಲು ಮುಂದಾದ್ರು ಜನರು ಕ್ಯಾರೆ ಅನ್ನಲಿಲ್ಲ. ಶಾಸಕರ ಕ್ರಮ ಖಂಡಿಸಿ ಆಕ್ರೋಶಗೊಂಡ ಗ್ರಾಮಸ್ಥರು ರಸ್ತೆ ಮಧ್ಯೆ ಧರಣಿ ಕುಳಿತು ಪರಿಹಾರಕ್ಕಾಗಿ ಪ್ರತಿಭಟನೆ ನಡೆಸಿದ್ರು.