ಮಂಡ್ಯ: ಭಾರತ್ ಜೋಡೋ ಯಾತ್ರೆಯಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಇಂದು ಭಾಗಿಯಾಗಿದ್ದರು. ಮಂಡ್ಯ ಜಿಲ್ಲೆಯ ಪಾಂಡವಪುರದ ಬೆಳ್ಳಾಲೆ ಆರೋಗ್ಯ ಕೇಂದ್ರದಿಂದ ಬೆಳಗ್ಗೆ ಆರಂಭವಾದ ಕಾಂಗ್ರೆಸ್ ಪಾದಯಾತ್ರೆಯಲ್ಲಿ ಸೋನಿಯಾ ಗಾಂಧಿ ಕೆಲಹೊತ್ತು ನಡೆದರು.
ಸೋನಿಯಾ ಗಾಂಧಿ ಅವರ ಶ್ಯೂ ಲೇಸ್ ಸರಿಪಡಿಸಿದ ರಾಹುಲ್ ಗಾಂಧಿ: ಪಾದಯಾತ್ರೆಯಲ್ಲಿ ನಡೆಯುತ್ತಿರುವಾಗ ಸೋನಿಯಾ ಗಾಂಧಿ ಅವರ ಶ್ಯೂ ಲೇಸ್ ಬಿಚ್ಚಿತ್ತು. ಆಗ ಪುತ್ರ ರಾಹುಲ್ ಗಾಂಧಿ ಅವರು ತಮ್ಮ ತಾಯಿಯ ಶ್ಯೂ ಲೇಸ್ ಕಟ್ಟಿ ಸರಿಪಡಿಸಿರುವುದು ಕಂಡುಬಂತು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
(ಓದಿ: ಮಂಡ್ಯದಲ್ಲಿ ಭಾರತ್ ಜೋಡೋ: ಪಾದಯಾತ್ರೆಯಲ್ಲಿ ಸೋನಿಯಾ ಗಾಂಧಿ ಭಾಗಿ)
ಎರಡು ದಿನದ ವಿಶ್ರಾಂತಿ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ಇಂದು ಮತ್ತೆ ಆರಂಭವಾಗಿದೆ. ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕೆಲಹೊತ್ತು ಹೆಜ್ಜೆ ಹಾಕಿ, ಪಾದಯಾತ್ರೆಗೆ ಬಲ ತುಂಬಿದರು. ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಹರಿಪ್ರಸಾದ್ ಸೇರಿದಂತೆ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಲಹೊತ್ತು ಮಾತ್ರ ಪಾದಯಾತ್ರೆಯಲ್ಲಿ ಸೋನಿಯಾ ಗಾಂಧಿ ಸಾಗಿದರು. ಬಳಿಕ ಅವರನ್ನು ರಾಹುಲ್ ಗಾಂಧಿ ಕಾರು ಹತ್ತಿಸಿ ಕಳುಹಿಸಿದರು. ಇಂದು ಸೋನಿಯಾ ಗಾಂಧಿ ಅವರು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಬಾಲಕಿ ಚಪ್ಪಲಿ ಸರಿಪಡಿಸಿದ್ದ ರಾಹುಲ್ ಗಾಂಧಿ: ಈ ಮೊದಲು ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಬಾಲಕಿಯ ಚಪ್ಪಲಿ ಸಡಿಲಿಕೆಯಾಗಿ ನಡೆಯಲು ತೊಂದರೆ ಅನುಭವಿಸುತ್ತಿದ್ದಳು. ಇದನ್ನು ಗಮನಿಸಿದ ರಾಹುಲ್ ತಕ್ಷಣವೇ ತಾವೇ ಬಾಗಿ ಬಾಲಕಿಯ ಚಪ್ಪಲಿಯನ್ನು ಸರಿಪಡಿಸಿ ಸರಳತೆ ಮೆರೆದಿದ್ದರು. ಇದು ಭಾರೀ ವೈರಲ್ ಆಗಿತ್ತು.
(ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಿದ ಪುಟ್ಟ ಬಾಲಕಿ: ಚಪ್ಪಲಿ ಧರಿಸಲು ನೆರವಾದ ರಾಹುಲ್)