ಮಂಡ್ಯ: ಸರ್ಕಾರ ಕಂದಾಯ ಇಲಾಖೆಯಲ್ಲಿ ಹೊಸ ಸಾಫ್ಟ್ ವೇರ್ ಹಾಗೂ ಹೊಸ ನೀತಿಯನ್ನು ಜಾರಿಗೆ ತಂದು, ಬೆಳೆಹಾನಿಯಾದಂತಹ ಪ್ರದೇಶಗಳ ಸಮೀಕ್ಷೆ ನಡೆಸಿ ಒಂದು ತಿಂಗಳಲ್ಲಿ ಬೆಳೆ ಹಾನಿ ಪರಿಹಾರವನ್ನು ಒದಗಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಕೆ ಹಾಗೂ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣ ಗೌಡ ಅವರೊಂದಿಗೆ ಕೆ.ಆರ್.ಪೇಟೆ ತಾಲೂಕಿನ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವ ಆರ್ ಅಶೋಖ್ ಪರಿಶೀಲನೆ ನಡೆಸಿದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಬೆಳೆ ಹಾನಿ ಪರಿಹಾರವನ್ನು ಒಂದು ತಿಂಗಳೊಳಗೆ ನೀಡುತ್ತಿದ್ದು, 2 ಸಾವಿರ ಕೋಟಿಗಿಂತ ಹೆಚ್ಚಿನ ಹಣವನ್ನು ರೈತರ ಖಾತೆಗೆ ಹಾಕುವಂತಹ ಕೆಲಸವನ್ನು ಮಾಡಿದ್ದೇವೆ ಎಂದು ಹೇಳಿದರು.
ರಾಜ್ಯದಲ್ಲಿ ಜೂನ್ನಿಂದ 4 ನೇ ಆಗಸ್ಟ್ ವರೆಗೆ ಒಟ್ಟು ಪ್ರವಾಹ ಪೀಡಿತ ಜಿಲ್ಲೆ 14, ಪ್ರವಾಹ ಪೀಡಿತ ಗ್ರಾಮಗಳು 115, ಪ್ರವಾಹ ಪೀಡಿತರ ಸಂಖ್ಯೆ 14,902, ಪ್ರವಾಹದಿಂದ ಸಾವನ್ನಪ್ಪಿದವರು 64 ಜನ. ಇದರಲ್ಲಿ ಸಿಡಿಲು ಬಡಿತದಿಂದ 16, ಮರ ಬಿದ್ದು 4 ಜನ, ಮನೆ ಕುಸಿತದಿಂದ 15 ಜನ, ಪ್ರವಾಹದ ಸೆಳತಕ್ಕೆ ಸಿಲುಕಿ 19 ಜನ, ಭೂ ಕುಸಿತದಿಂದ 9, ವಿದ್ಯುತ್ ಅಪಘಾತದಿಂದ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ವಿವರಿಸಿದರು.