ಮಂಡ್ಯ:ಕಾವೇರಿ ಹೋರಾಟದಲ್ಲಿ ಕೂಡಲ ಸಂಗಮ ಮಠದ ಶ್ರೀಗಳು ಶುಕ್ರವಾರ ಭಾಗಿಯಾದರು. ಕೆಲ ದಿನಗಳಿಂದ ಸಪ್ಪೆಯಾಗಿದ್ದ ಕಾವೇರಿ ಚಳವಳಿಯನ್ನು ತೀವ್ರಗೊಳಿಸಲು ಹೋರಾಟಗಾರರು ನಿರ್ಧರಿಸಿದ್ದರು. ಅದರಂತೆ ಶುಕ್ರವಾರ ಮಂಡ್ಯ ಸಮೀಪದ ಇಂಡುವಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಹಳ್ಳಿಗಳಿಂದ ನೂರಾರು ಜನರು ತಮ್ಮ ಎತ್ತಿನಗಾಡಿಗಳು, ಟ್ರ್ಯಾಕ್ಟರ್ ಮೂಲಕ ಮಂಡ್ಯದ ಸಂಜಯ ವೃತ್ತದಲ್ಲಿ ಹೆದ್ದಾರಿ ತಡೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಕಾವೇರಿ ಹೋರಾಟದಲ್ಲಿ ಭಾಗಿಯಾಗಿದ್ದ ಕೂಡಲ ಸಂಗಮ ಮಠದ ಪೀಠಾಧ್ಯಕ್ಷರಾದ ಜಯ ಮೃತ್ಯುಂಜಯ ಸ್ವಾಮೀಜಿ ಸಂಜಯ ವೃತ್ತದಿಂದ ರೈತರ ಜೊತೆ ಎತ್ತಿನಗಾಡಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ನಡೆಸುತ್ತಿರುವ ನಿರಂತರ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡರು.
ಈ ವೇಳೆ ಮಾತನಾಡಿದ ಜಯಮೃತ್ಯುಂಜಯ ಶ್ರೀಗಳು, ಉತ್ತರ ಕರ್ನಾಟಕದ ಎಲ್ಲಾ ಧಾರ್ಮಿಕ ಮುಖಂಡರ ಪರವಾಗಿ ಇಲ್ಲಿಗೆ ಬಂದಿದ್ದೇನೆ. ಕಾವೇರಿ ಕೃಷ್ಣೆ ನಮ್ಮ ಕಣ್ಣುಗಳಿದ್ದಂತೆ. ಕಾವೇರಿ ಋಣ ಲಕ್ಷಾಂತರ ಮಂದಿಯ ಮೇಲೆ ಇದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗಿಲ್ಲ, ಬರಗಾಲದ ಪರಿಸ್ಥಿತಿ ಇದೆ. ಇಂತಹ ಸಂದರ್ಭಗಳಲ್ಲಿ ಪ್ರಾಧಿಕಾರದ ಸದಸ್ಯರು ಅವೈಜ್ಞಾನಿಕ ತೀರ್ಪುಗಳನ್ನು ನೀಡುತ್ತಿದ್ದಾರೆ. ಆದೇಶ ಪಾಲನೆಯ ಹೆಸರಿನಲ್ಲಿ ನೀರು ನೀಡುತ್ತಿರುವುದು ದೊಡ್ಡ ತಪ್ಪು. ಈ ಹಿಂದೆ ನೀಡಿದ್ದ ತೀರ್ಪು ಅಂದಿನ ಕಾಲದ ಜನಸಂಖ್ಯೆಯನ್ನು ಗುರಿಯಾಗಿಟ್ಟುಕೊಂಡು ಕೊಡಲಾಗಿತ್ತು. ಆದರೆ ಇಂದು ಪರಿಸ್ಥಿತಿ ಹಾಗಿಲ್ಲ. ಬೆಂಗಳೂರಿನ ಜನಸಂಖ್ಯೆ 5 ಪಟ್ಟು ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಹಳೆಯ ತೀರ್ಪನ್ನೇ ಗಮನದಲ್ಲಿಟ್ಟುಕೊಂಡು ನೀರು ಬಿಡ್ರಿ ಬಿಡ್ರಿ ಅಂದ್ರೆ ಎಲ್ಲಿಂದ ಬಿಡೋದು.