ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಂಡ್ಯ:ಒಕ್ಕಲಿಗರ ಬಗ್ಗೆ ಹಾಗೂ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ವಿರುದ್ಧ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ನೇತೃತ್ವದಲ್ಲಿ ವಿವಿಧ ಸಂಘನೆಗಳು ಬೃಹತ್ ಖಂಡನಾ ಸಭೆ ಮತ್ತು ಪ್ರತಿಭಟನೆಯನ್ನು ನಡೆಸಿದರು.
ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಇತಿಹಾಸವನ್ನು ತಿರುಚುವ ಪ್ರಯತ್ನ ಮಾಡುತ್ತಿರುವ ಅಡ್ಡಂಡ ಕಾರ್ಯಪ್ಪ ಅವರ ಹೇಳಿಕೆ ಅಲ್ಲಿಗೆ ನಿಲ್ಲದೆ, ಆದಿಚುಂಚನಗಿರಿ ಪೀಠಾಧ್ಯಕ್ಷರ ಮೇಲೆ ಆರೋಪ ಮಾಡುವಂತಹ ಹೇಳಿಕೆ ನೀಡಿದ್ದಕ್ಕಾಗಿ ಈ ಸಭೆ ನಡೆಯುತ್ತಿದೆ. ಈಗಾಗಲೇ ಪ್ರತಿಭಟನೆಗೆ ಬೆಚ್ಚಿ ಸ್ವಾಮೀಜಿಗಳ ಕ್ಷಮೆಯಾಚಿಸಿದ್ದಾರೆ. ಶ್ರೀ ಮಠ ಒಕ್ಕಲಿಗರಿಗೆ ಮಾತ್ರ ಸೀಮಿತವಾಗಿಲ್ಲ. ಇದು ಸರ್ವಜನಾಂಗೀಯ ತೋಟವಾಗಿದೆ. ಅವರು ರಾಜಕಾರಣದ ಓಲೈಕೆಗೆ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಈ ಹಿಂದೆಯೂ ಈ ರೀತಿ ಹೇಳಿಕೆಗಳನ್ನು ನೀಡಿದ್ದರು. ಅವರನ್ನು ಅಡ್ಡಂಡ ಕಾರ್ಯಪ್ಪ ಅಲ್ಲ, ಅಡ್ಡಡ್ಡ ಕಾರ್ಯಪ್ಪ ಎಂದು ಕರೆದರೆ ಸೂಕ್ತ ಎಂದು ಕಿಡಿಕಾರಿದರು.
ನೀವು ನಿಜವಾದ ಸಾಹಿತಿಯಾಗಿದ್ದರೆ ನಿಮಗೆ ಯಾಕೆ ರಾಜಕಾರಣ? ಅದಕ್ಕೆ ಬೇರೆ ಜನ ಇದ್ದಾರೆ. ನಿರ್ಮಲಾನಂದನಾಥ ಸ್ವಾಮೀಜಿ ಕರೆದು ಸೌಹಾರ್ದಯುತವಾಗಿ ತೀರ್ಮಾನ ಮಾಡಿದ ಮೇಲೆ ಅದನ್ನು ಪ್ರಶ್ನೆ ಮಾಡಲು ನೀವು ಯಾರು? ಯಾಕೆ ಸಾಮಾಜಿಕ ಸೌಹರ್ದತೆಗೆ ಧಕ್ಕೆ ತರುತ್ತೀರಿ, ಯಾಕೆ ಇತಿಹಾಸಕ್ಕೆ ಅಪಮಾನ ಮಾಡುತ್ತೀರಿ. ಈ ವಿವಾದಕ್ಕೆ ಸ್ವಾಮೀಜಿ ತೆರೆ ಎಳೆದಿದ್ದಾರೆ. ನಾಲಿಗೆಯನ್ನು ಹರಿಬಿಡುವ ಕೆಲಸವನ್ನು ಮಾಡಬಾರದು ಎಂದು ಹೇಳಿದರು.
ಅಡ್ಡಂಡ ಕಾರ್ಯಪ್ಪ ವಿರುದ್ಧ ಮೂರು ನಿರ್ಣಯ:ಪ್ರತಿಭಟನಾಕಾರ ರವೀಂದ್ರ ಕುಮಾರ್ ಮಾತನಾಡಿ, ಅಡ್ಡಂಡ ಕಾರ್ಯಪ್ಪ ಅವರು ನಿರ್ಮಲಾನಂದನಾಥ ಸ್ವಾಮೀಜಿ ಬಗ್ಗೆ ನೀಡಿರುವ ಅವಹೇಳಕಾರಿ ಹೇಳಿಕೆ ಖಂಡಿಸಿ ಮೂರು ನಿರ್ಣಯಗಳನ್ನು ಮಾಡಿದ್ದೇವೆ. ಅಡ್ಡಂಡ ಕಾರ್ಯಪ್ಪ ಹೇಳಿಕೆಗೆ ಸಭೆ ಸರ್ವಾನುಮತದಿಂದ ಖಂಡನೆ, ಸರ್ಕಾರ ಅಡ್ಡಂಡ ಕಾರ್ಯಪ್ಪರನ್ನ ರಂಗಾಯಣ ನಿರ್ದೇಶಕ ಸ್ಥಾನದಿಂದ ವಜಾಗೊಳಿಸಬೇಕು, ನಿರ್ಲಕ್ಷ್ಯ ಮಾಡಿದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ನಿರ್ಣಯ ಮಾಡಲಾಗಿದೆ ಎಂದರು.
ಜಿ ಟಿ ವೀರಪ್ಪ ಮಾತನಾಡಿ, ಮಂಡ್ಯದಲ್ಲಿ ಯಾವುದೇ ಕೋಮು ಗಲಭೆಗಳಿಲ್ಲ, ಸೌಹರ್ದ ಭಾವನೆ ಇದೆ. ರಾಜಕೀಯ ಮಾಡಲು ಹುಟ್ಟುಹಾಕಿರುವ ವಿಷಯವಾಗಿದೆ. ಅವರ ಸರ್ಕಾರದ ಸಾಧನೆಗಳನ್ನು ಹೇಳಿಕೊಂಡು ರಾಜಕೀಯ ಮಾಡಲಿ ಅದನ್ನ ಬಿಟ್ಟು ಮಂಡ್ಯದಲ್ಲಿ ಕೋಮುಗಲಭೆಯನ್ನು ಸೃಷ್ಟಿಸಿ ರಾಜಕೀಯ ಮಾಡುವುದು ಹೀನಕೃತ್ಯ ಎಂದು ಮಂಡ್ಯದ ಜನತೆ ಪ್ರತಿಭಟಿಸುತ್ತಿದ್ದೇವೆ ಎಂದು ಹೇಳಿದರು.
ಸಭೆ ಬಳಿಕ ರೈತ ಸಭಾಂಗಣದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಮಂಡ್ಯದ ರೈತ ಸಭಾಂಗಣದಲ್ಲಿ ನಡೆದ ಬೃಹತ್ ಖಂಡನಾ ಸಭೆಯಲ್ಲಿ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್, ಸ್ವಾಭಿಮಾನಿ ಒಕ್ಕಲಿಗರ ವೇದಿಕೆ, ಆದಿಚುಂಚನಗಿರಿ ಮಠದ ಭಕ್ತರು, ವಿವಿಧ ಜನಪರ ಸಂಘಟನೆಗಳು. ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಮಾಜಿ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ:ನಿರ್ಮಲಾನಂದ ಸ್ವಾಮೀಜಿಗಳಲ್ಲಿ ಕ್ಷಮೆ ಯಾಚಿಸಿದ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ