ಕರ್ನಾಟಕ

karnataka

ETV Bharat / state

ಮಂಡ್ಯದಲ್ಲಿ ಪ್ರಧಾನಿ ಮೋದಿ ವಿರುದ್ಧ ಪ್ರತಿಭಟನೆ: ಗೋ ಬ್ಯಾಕ್ ಮೋದಿ ಅಭಿಯಾನ - ಈಟಿವಿ ಭಾರತ ಕನ್ನಡ

ಮಂಡ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರತಿಭಟನೆ - ಕಾಂಗ್ರೆಸ್​ ಮತ್ತು ನಿವೇಶನ ರಹಿತರಿಂದ ಪ್ರತಿಭಟನೆ - ಗೋ ಬ್ಯಾಕ್​ ಮೋದಿ ಅಭಿಯಾನ - ಕಾಂಗ್ರೆಸ್​ ಕಪ್ಪು ಬಾವುಟ ಪ್ರದರ್ಶನ ಎಚ್ಚರಿಕೆ

protest-against-pm-modi-at-mandya-go-back-modi-campaign
ಮಂಡ್ಯದಲ್ಲಿ ಪ್ರಧಾನಿ ಮೋದಿ ವಿರುದ್ಧ ಪ್ರತಿಭಟನೆ : ಬಿಸಿ ಗೋ ಬ್ಯಾಕ್ ಮೋದಿ ಅಭಿಯಾನ

By

Published : Mar 7, 2023, 3:52 PM IST

Updated : Mar 7, 2023, 4:02 PM IST

ಮಂಡ್ಯದಲ್ಲಿ ಪ್ರಧಾನಿ ಮೋದಿ ವಿರುದ್ಧ ಪ್ರತಿಭಟನೆ : ಬಿಸಿ ಗೋ ಬ್ಯಾಕ್ ಮೋದಿ ಅಭಿಯಾನ

ಮಂಡ್ಯ:ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ಹೈವೇ ಉದ್ಘಾಟನೆಗೆ ಮುಹೂರ್ತ ನಿಗದಿಯಾಗಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಆಗಮಿಸಿ ನೂತನ ಹೆದ್ದಾರಿಯ ಉದ್ಘಾಟನೆ ಮಾಡಲಿದ್ದಾರೆ. ಪ್ರಧಾನಿ ಆಗಮನಕ್ಕೂ ಮುನ್ನವೇ ಮೋದಿ ಅವರಿಗೆ ಪ್ರತಿಭಟನೆ ಬಿಸಿ ಮುಟ್ಟಿದೆ. ಕಾಂಗ್ರೆಸ್ ಸೇರಿದಂತೆ ವಿವಿಧ ಸಂಘಟನೆಗಳು ಗೋ ಬ್ಯಾಕ್ ಮೋದಿ ಅಭಿಯಾನ ಶುರು ಮಾಡಿದ್ದು, ಕಪ್ಪು ಬಾವುಟ ಪ್ರದರ್ಶನದ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ಹೈವೇ ಬಹು ನಿರೀಕ್ಷಿತ ಯೋಜನೆಗಳಲ್ಲಿ ಒಂದು. ಸುಮಾರು 10 ಸಾವಿರ ಕೋಟಿ ಯೋಜನೆ ಕೈಗೊಂಡಿದ್ದು, ಕಾಮಗಾರಿ ಭಾಗಶಃ ಮುಗಿಯುವ ಹಂತ ತಲುಪಿದೆ. ಹೀಗಾಗಿ, ಈ ಹೆದ್ದಾರಿ ಉದ್ಘಾಟನೆಗೆ ದಿನಾಂಕವನ್ನು ನಿಗದಿ ಮಾಡಲಾಗಿದೆ. ಮಾರ್ಚ್ 12 ರಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಆಗಮಿಸಿ, ನೂತನ ಎಕ್ಸ್ ಪ್ರೆಸ್ ಹೈವೇಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಬಳಿಕ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆ ಬಳಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ. ಇದೇ ವೇಳೆ ಮಂಡ್ಯ ನಗರದಲ್ಲಿ ರೋಡ್ ಶೋ ನಡೆಸಲು ಸಕಲ ಸಿದ್ಧತೆ ನಡೆಸಲಾಗಿದೆ. ಈ ನಡುವೆಯೇ ಕಾಂಗ್ರೆಸ್‌ ಪಕ್ಷ ಮತ್ತು ವಿವಿಧ ಸಂಘಟನೆಗಳು ಪ್ರಧಾನಿ ಮೋದಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

ಮೋದಿ ಭೇಟಿ ವಿರೋಧಿಸಿ ನಿವೇಶನ ರಹಿತರ ಪ್ರತಿಭಟನೆ :ನಿವೇಶನ ರಹಿತರಿಗೆ ಸೂರು ಕಲ್ಪಿಸುವಂತೆ ಸ್ವಂತ ಮನೆ ನಮ್ಮ ಹಕ್ಕು ಹೋರಾಟ ಸಮಿತಿ ಈ ಪ್ರತಿಭಟನೆಗೆ ಸಾತ್​ ನೀಡಿದೆ. ಕಳೆದ ಹಲವಾರು ವರ್ಷಗಳಿಂದ ನಿವೇಶನ ರಹಿತರಿಗೆ ಸೂರು ಒದಗಿಸಲು ಈ ಸಮಿತಿ ನಿರಂತರ ಹೋರಾಟ ಮಾಡುತ್ತಿದೆ. ಈ ಸಂಬಂಧ ಮೂರು ತಿಂಗಳುಗಳ ಕಾಲ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಿತ್ತು.

ಈ ಹೋರಾಟದ ಫಲವಾಗಿ ಜಿಲ್ಲಾಡಳಿತ ನಿವೇಶನ ರಹಿತರಿಗೆ ಸೈಟ್ ಕೊಡ ಮಾಡಲು ಜಮೀನು ಮೀಸಲಿಟ್ಟಿತ್ತು. ಆದರೆ ಕೆಲ ಭೂಗಳ್ಳರ ಜೊತೆ ಸೇರಿ ಅಧಿಕಾರಿಗಳು ಕೋರ್ಟ್ ನಲ್ಲಿ ಇದಕ್ಕೆ ತಡೆ ತಂದಿದ್ದಾರೆ. ಈ ತಡೆ ತೆರವಿಗೆ ಯಾವುದೇ ಕ್ರಮ ವಹಿಸದೇ ಭೂಗಳ್ಳರ ಪರ ನಿಂತಿದ್ದು, ನಿವೇಶನ ರಹಿತರು ಬೀದಿಗೆ ಬಂದಿದ್ದಾರೆ. ಹೀಗಾಗಿ ತಮ್ಮ ಬೇಡಿಕೆ ಈಡೇರಿಸದ ಸರ್ಕಾರ, ಜಿಲ್ಲಾಡಳಿತದ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡಿರುವ ಜನರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಗೋ ಬ್ಯಾಕ್ ಅಭಿಯಾನ ಆರಂಭಿಸಿದ್ದಾರೆ. ಪ್ರಧಾನಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಲು ನಿರ್ಧರಿಸಿರುವ ಪ್ರತಿಭಟನಾಕಾರರು ಹಳ್ಳಿ ಹಳ್ಳಿ ಸಂಚರಿಸಿ, ಜನರ ಸಂಘಟನೆಗೆ ನಿರ್ಧರಿಸಿದ್ದಾರೆ.

ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಕಾಂಗ್ರೆಸ್​​ ಎಚ್ಚರಿಕೆ :ಪ್ರಧಾನಿ ಮಂಡ್ಯ ಭೇಟಿಯನ್ನು ಕಾಂಗ್ರೆಸ್‌ ಪಕ್ಷ ಖಂಡಿಸಿದೆ. ಮಂಡ್ಯ ಜಿಲ್ಲಾ ಕಾಂಗ್ರೆಸ್‌ ಸಮಿತಿ ಕೂಡ ಮೋದಿ ವಿರುದ್ಧ ಗೋ ಬ್ಯಾಕ್ ಅಭಿಯಾನ ಶುರು ಮಾಡಿದ್ದು, ಗೆಜ್ಜಲಗೆರೆ ಬಳಿ ಕಪ್ಪು ಬಾವುಟ ಪ್ರದರ್ಶನಕ್ಕೆ ಮುಂದಾಗಿದೆ. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿರುವ ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್, ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದರು. ಬೆಂಗಳೂರು - ಮೈಸೂರು ಹೆದ್ದಾರಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಚುನಾವಣೆ ಗಿಮಿಕ್ ಗಾಗಿ ಪ್ರಧಾನಿ ಕರೆಸಿ ಉದ್ಘಾಟನೆ ಮಾಡುತ್ತಿದ್ದಾರೆ. ಬಿಜೆಪಿಗೆ ಕಾಂಗ್ರೆಸ್​​ನ ಭಯ ಶುರುವಾಗಿದೆ. ಮಂಡ್ಯದಲ್ಲಿ 109 ದಿನ ರೈತರು ಧರಣಿ ನಡೆಸಿದರೂ ಬಿಜೆಪಿ ಸರ್ಕಾರ ಸ್ಪಂದಿಸಿಲ್ಲ. ಯುವಕರಿಗೆ ಉದ್ಯೋಗ ಸೃಷ್ಟಿಸುವಲ್ಲಿ ಮೋದಿ ವಿಫಲವಾಗಿದ್ದಾರೆ ಎಂದು ಟೀಕಿಸಿದರು.

ಕೋವಿಡ್ ಸಂದರ್ಭದಲ್ಲಿ ರಾಜ್ಯಕ್ಕೆ ಮೋದಿ ಬರಲಿಲ್ಲ. ಮಳೆ ಹಾನಿಯಾಗಿ ಸಾಕಷ್ಟು ಜನ ಸತ್ತರು ಮೋದಿ ಬರಲಿಲ್ಲ.ಇದೀಗ ಚುನಾವಣೆಗಾಗಿ ಮಂಡ್ಯಕ್ಕೆ ಮೋದಿ ಬರುತ್ತಿದ್ದಾರೆ. ರೈತ ವಿರೋಧಿ ಕಾಯ್ದೆ ವಾಪಸ್​​ ಪಡೆದಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಸರಿಪಡಿಸಿ ಬಂದಿದ್ದರೆ ಒಂದು ಅರ್ಥ ಇದೆ. ಇಂತಹ ಸಾಕಷ್ಟು ಸಮಸ್ಯೆ ಇದ್ದರೂ ಹೆದ್ದಾರಿ ಉದ್ಘಾಟನೆ ನೆಪದಲ್ಲಿ ಜನರನ್ನು ಮರಳು ಮಾಡಲು ಬರುತ್ತಿರುವುದು ಖಂಡನೀಯ. ತಕ್ಷಣವೇ ಮೋದಿ ರಾಜ್ಯದ ಜನರ ಸಮಸ್ಯೆ ಬಗೆಹರಿಸಲು ಮುಂದಾಗಬೇಕು. ಇಲ್ಲವಾದರೆ, ಪ್ರಧಾನಿ ಆಗಮಿಸುವ ಮಾ.12ರಂದು ಹೆದ್ದಾರಿಯಲ್ಲಿ ಗೋ ಬ್ಯಾಕ್ ಮೋದಿ ಎಂದು ಕಪ್ಪು ಬಾವುಟ ಪ್ರದರ್ಶನ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ :ಕೆಲವು ಹಾಲಿ ಶಾಸಕರಿಗೆ ಟಿಕೆಟ್‌ ಕೈತಪ್ಪಬಹುದು: ಬಿ.ಎಸ್‌.ಯಡಿಯೂರಪ್ಪ

Last Updated : Mar 7, 2023, 4:02 PM IST

ABOUT THE AUTHOR

...view details