ಮಂಡ್ಯ: ಜಿಲ್ಲಾ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಮಳವಳ್ಳಿ ಕಾಂಗ್ರೆಸ್ನಲ್ಲಿ ಎರಡು ಬಣ ಸೃಷ್ಟಿಯಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪದಗ್ರಹಣದಲ್ಲಿ ಅಸಮಾಧಾನ ಬಯಲಾಗಿದೆ.
ಮಾಜಿ ಶಾಸಕ ನರೇಂದ್ರ ಸ್ವಾಮಿ ಕಾರ್ಯಕರ್ತರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಒಂದು ಬಣ ಪ್ರತ್ಯೇಕವಾಗಿ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಆಯೋಜಿಸಿತ್ತು. ತಾಲೂಕಿನ ಹಲವು ಕಡೆ ಪ್ರತ್ಯೇಕವಾಗಿ ನೇರ ಪ್ರಸಾರ ವೀಕ್ಷಣೆಗೆ ಅಭಿಮಾನಿಗಳು ವ್ಯವಸ್ಥೆ ಮಾಡಿದ್ದರು.
ಮಂಡ್ಯ ಕಾಂಗ್ರೆಸ್ನಲ್ಲಿ ಭಿನ್ನಮತ ಇನ್ನೊಂದೆಡೆ ಮಾಜಿ ಸಚಿವ, ಮಾಜಿ ಶಾಸಕ ನರೇಂದ್ರ ಸ್ವಾಮಿ ನೇತೃತ್ವದಲ್ಲೂ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣದ ನೇರ ಪ್ರಸಾರ ಕಾರ್ಯಕ್ರಮ ವೀಕ್ಷಣೆಗೆ ಸಿದ್ಧತೆ ಮಾಡಿದ್ದರು. ಡಿಕೆಶಿ ಅಭಿಮಾನಿಗಳೂ ಪ್ರತ್ಯೇಕವಾಗಿ ವೀಕ್ಷಣೆಗೆ ಏರ್ಪಾಡು ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಮಾಜಿ ಶಾಸಕರ ವಿರುದ್ಧ ದೂರು ನೀಡಲು ಅಭಿಮಾನಿಗಳು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಆ ಮೂಲಕ ಮಳವಳ್ಳಿ ಕಾಂಗ್ರೆಸ್ನಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಡಿಕೆಶಿಗೆ ಮೊದಲ ದಿನವೇ ಬಂಡಾಯದ ಕಹಳೆ ಊದಿರೋದು ಸಂಕಷ್ಟ ತಂದಿದೆ.
ಜಿಲ್ಲಾ ಕಾಂಗ್ರೆಸ್ಸನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಕೆಪಿಸಿಸಿ ಅಧ್ಯಕ್ಷರು ಯಾವ ನಡೆ ಅನುಸರಿಸುತ್ತಾರೋ ಎಂದು ಕಾದು ನೋಡಬೇಕಾಗಿದೆ. ಕಳೆದ ಲೋಕಸಭೆ ಹಾಗೂ ಉಪ ಚುನಾವಣೆಯಲ್ಲಿ ಬಣ ರಾಜಕೀಯ ಸದ್ದು ಮಾಡಿತ್ತು. ಮತ್ತೆ ಬಣ ರಾಜಕೀಯ ಹುಟ್ಟಿಕೊಂಡರೆ ಕಾಂಗ್ರೆಸ್ಗೆ ಸವಾಲಾಗಿ ಪರಿಣಮಿಸಲಿದೆ.