ಕರ್ನಾಟಕ

karnataka

ETV Bharat / state

ಮಾದೇಗೌಡರು ನಮಗೆ ತಂದೆಯ ಸಮಾನರಾಗಿದ್ದರು: ಅಂತಿಮ ದರ್ಶನ ಪಡೆದು ಸಂಸದೆ ಸುಮಲತಾ ಕಂಬನಿ - ಅಂತಿಮ ದರ್ಶನ

ಸಂಸದೆ ಸುಮಲತಾ ಅಂಬರೀಶ್, ಮಾಜಿ ಸಂಸದ ಸಿ.ಎಸ್. ಪುಟ್ಟರಾಜು ಸೇರಿದಂತೆ ಗಣ್ಯರು ಜಿ. ಮಾದೇಗೌಡರ ಅಂತಿಮ ದರ್ಶನ ಪಡೆದರು.

Political leaders pays last respect
ಮಾದೇಗೌಡರ ಅಂತಿಮ ದರ್ಶನ ಪಡೆದ ಗಣ್ಯರು

By

Published : Jul 18, 2021, 2:04 PM IST

ಮಂಡ್ಯ : ಹಿರಿಯ ಮುತ್ಸದ್ದಿ, ನಮ್ಮ ಜಿಲ್ಲೆಯೆ ಕಾವೇರಿ ಹೋರಾಟಗಾರರು, ನಮಗೆ ತಂದೆ ಸಮಾನರಾದ ಜಿ‌.ಮಾದೇಗೌಡರ ಸಾವು ತುಂಬಲಾರದ ನಷ್ಟ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.

ಮಂಡ್ಯದ ಬಂದೀಗೌಡ ಬಡಾವಣೆಯ ನಿವಾಸದಲ್ಲಿ ಮಾದೇಗೌಡರ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ಮಾದೇಗೌಡರು ಪ್ರಾಮಾಣಿಕ ಧ್ಯೇಯ ಇಟ್ಟುಕೊಂಡು ಹೋರಾಟ ಮಾಡಿದವರು. ನನಗೆ ಅವರು ಪರಿಚಯ ಆಗಿದ್ದು 25 ವರ್ಷದ ಹಿಂದೆ. ನಾವು ಮದುವೆಯಾದ ಸಂದರ್ಭದಲ್ಲಿ ಅಂಬರೀಶ್ ಅವರು ನನಗೆ ಮಾದೇಗೌಡರನ್ನು ಪರಿಚಯ ಮಾಡಿಸಿದ್ದರು. ತಂದೆ ಇಲ್ಲದ ನನಗೆ ಮಾದೇಗೌಡರು ತಂದೆಯ ಸಮಾನರಾಗಿದ್ದರು ಎಂದರು.

ಮಾದೇಗೌಡರ ಅಂತಿಮ ದರ್ಶನ ಪಡೆದ ಗಣ್ಯರು

ಮಾದೇಗೌಡರು ಮತ್ತು ನಮ್ಮ ಬಾಂಧವ್ಯ ಅಷ್ಟು ಆತ್ಮೀಯತೆ ಮತ್ತು ಗೌರವದಿಂದ ಕೂಡಿತ್ತು. ಮಂಡ್ಯಕ್ಕೆ ಬಂದಾಗ ನನ್ನ ಮನೆಗೆ ಬರಬೇಕು, ನೀನು ನಮ್ಮ‌ಸೊಸೆ ಎಂದು ಗೌಡರು ಹೇಳುತ್ತಿದ್ದರು. ರಾಜಕೀಯವಾಗಿ ಅವರ ಪಕ್ಷಕ್ಕೆ ನಾನೂ ಬರಬೇಕು ಎಂಬ ಆಶಯ ವ್ಯಕ್ತಪಡಿಸಿದ್ದರು ಎಂದು ಸುಮಲತಾ ಹೇಳಿದರು.

ಮಾಜಿ ಸಂಸದ ಸಿ.ಎಸ್. ಪುಟ್ಟರಾಜು ಕೂಡ ಮಾದೇಗೌಡರ ಅಂತಿಮ ದರ್ಶನ ಪಡೆದರು. ಬಳಿಕ ಮಾತನಾಡಿದ ಅವರು, ಮಂಡ್ಯದ ಒಂದು ಹೋರಾಟದ ಕೊಂಡಿ ಕಳಚಿದೆ. ರಾಜ್ಯ ಮತ್ತು ರಾಷ್ಟ್ರದ ರಾಜಕಾರಣದಲ್ಲಿ ಮಂಡ್ಯದ ತಾಕತ್ತು ಏನೂ ಅನ್ನುವುದುನ್ನು ತೋರಿಸಿದವರು ಮಾದೇಗೌಡರು. ಅದರಲ್ಲೂ ಕಾವೇರಿ ಹೋರಾಟವನ್ನು ದೇವೇಗೌಡರು ಮತ್ತು ಮಾದೇಗೌಡರು ಒಟ್ಟಾಗಿ ಮುಂದುವರೆಸಿದ್ದರು ಎಂದು ಸ್ಮರಿಸಿದರು.

ಹವಾಮಾನ ವೈಪರಿತ್ಯ ಹಿನ್ನೆಲೆ ಡಿಕೆಶಿ ಗೈರು :ಹವಾಮಾನ ವೈಪರೀತ್ಯದ ಹಿನ್ನೆಲೆ ಮಾಜಿ ಸಂಸದ ಜಿ.ಮಾದೇಗೌಡರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಮಾದೇಗೌಡರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ನಾನು ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಬೇಕಿತ್ತು. ಆದರೆ, ಬಂಜಾರ ಸಮುದಾಯದ ಸಮಸ್ಯೆ ಆಲಿಸುವ ಪೂರ್ವನಿಗದಿತ ಕಾರ್ಯಕ್ರಮ ಹಿನ್ನೆಲೆ ವಿಜಯಪುರದ ಜಮಖಂಡಿಯಲ್ಲಿದ್ದೇನೆ.

ಎಲ್ಲವನ್ನು ರದ್ದು ಮಾಡಿ ಹೆಲಿಕಾಪ್ಟರ್ ಮೂಲಕ ತೆರಳಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಪ್ರಯತ್ನಿಸಿದೆ. ಆದರೆ, ಹವಾಮಾನ ವೈಪರೀತ್ಯದಿಂದ ಹೆಲಿಕಾಪ್ಟರ್ ಹಾರಾಟಕ್ಕೆ ಪೂರಕವಾಗಿಲ್ಲ ಎಂದು ಪೈಲಟ್ ಹೇಳಿದ್ದಾರೆ. ರಸ್ತೆ ಮಾರ್ಗವಾಗಿ ಹೊರಟರೆ ಸಕಾಲಕ್ಕೆ ತಲುಪಲು ಆಗುವುದಿಲ್ಲ. ಆದ ಕಾರಣ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಇದು ನೋವಿನ ಸಂಗತಿ. ಆದರೆ 11ನೇ ದಿನದ ಉತ್ತರಕ್ರಿಯೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದು ತಿಳಿಸಿದ್ದಾರೆ.

ಓದಿ : ಮಂಡ್ಯದಲ್ಲಿ ಸಾರ್ವಜನಿಕರಿಂದ ಜಿ ಮಾದೇಗೌಡರ ಅಂತಿಮ ದರ್ಶನ

ಮಾದೇಗೌಡರು ರಾಜ್ಯ ಕಂಡ ಮುತ್ಸದ್ಧಿ ನಾಯಕರು ಹಾಗೂ ರೈತಪರ ಹೋರಾಟಗಾರರು. ನನಗೆ ಬಹಳ ಆಪ್ತರು. ವಿದ್ಯಾರ್ಥಿ ದಿನಗಳಿಂದ ಹಿಡಿದು ಇಲ್ಲಿಯವರೆಗೆ ಅವರೊಟ್ಟಿಗೆ 45 ವರ್ಷಗಳ ಕಾಲ ರಾಜಕೀಯ ಮಾಡಿದ್ದೇನೆ. ಆದರೆ ಅವರು ಇಂದು ನಮ್ಮೊಟ್ಟಿಗಿಲ್ಲ. ಕಾವೇರಿ ಹೋರಾಟ ಅವರ ಉಸಿರಾಗಿತ್ತು. ಅವರು ನಮ್ಮನ್ನು ಅಗಲಿರುವುದು ಬಹಳ ದುಃಖ ಹಾಗೂ ನೋವಿನ ಸಂಗತಿ ಎಂದು ಡಿಕೆಶಿ ಹೇಳಿದ್ದಾರೆ.

ರಾಷ್ಟ್ರೀಯ ನಾಯಕರ ಸಂತಾಪ :ನಾನು ಮಾದೇಗೌಡರ ಪುತ್ರ ಮಧು ಮಾದೇಗೌಡ ಅವರ ಜೊತೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಾದೇಗೌಡರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ನಾವು ಧೀಮಂತ ನಾಯಕನನ್ನು ಕಳೆದುಕೊಂಡಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ಬಾಗಲಕೋಟೆಯಲ್ಲಿ ಪೂರ್ವ ನಿಗದಿಯಾಗಿರುವ ಕಾರ್ಯಕ್ರಮ ಇಂದು ಮುಂದುವರಿಯಲಿದೆ. ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಚನ್ನಪಟ್ಟಣದಲ್ಲಿ ಶ್ರದ್ಧಾಂಜಲಿ ಸಭೆ

ಚನ್ನಪಟ್ಟಣದಲ್ಲಿ ಶ್ರದ್ಧಾಂಜಲಿ ಸಭೆ :ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ಮಾದೇಗೌಡರಿಗೆ ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ಕಾವೇರಿ ನೀರಿನಿಂದ ಮಾದೇಗೌಡರ ಭಾವಚಿತ್ರಕ್ಕೆ ಅಭಿಷೇಕ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.

ABOUT THE AUTHOR

...view details