ಮಂಡ್ಯ: ಜನರಿಗೆ ಬುದ್ದಿ ಹೇಳುವ ಪೊಲೀಸರೇ ಕುಟುಂಬದ ಜೊತೆ ನಿಯಮ ಮೀರಿ ಕೆಆರ್‌ಎಸ್ ಹಿನ್ನೀರಿನಲ್ಲಿ ಮೋಜುಮಸ್ತಿ ಮಾಡಿದ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ನಡೆದಿದೆ.
ಕೆಆರ್‌ಎಸ್ ಹಿನ್ನೀರಿನಲ್ಲಿ ಸಾರ್ವಜನಿಕರಿಗೆ ನಿಷೇಧವಿದೆ. ಆದ್ರೆ ಮೈಸೂರಿನ ಪೊಲೀಸ್ ಅಕಾಡೆಮಿಯ ಸಿಬ್ಬಂದಿ ಮಾತ್ರ ಪಿಕ್‌ನಿಕ್ ನೆಪದಲ್ಲಿ ತಮ್ಮ ಕುಟುಂಬದವರ ಜತೆ ಸೇರಿ ಡಿಜೆ ಹಾಕಿಕೊಂಡು ಮೋಜು ಮಸ್ತಿ ನಡೆಸುತ್ತಿದ್ದಾರೆ. ಇದರಿಂದ ಅಧಿಕಾರಿಗಳಿಗೆ ಒಂದು ನ್ಯಾಯ, ಸಾಮಾನ್ಯರಿಗೆ ಒಂದು ನ್ಯಾಯನಾ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಸಾರ್ವಜನಿಕರ ಪ್ರವೇಶ ನಿಷೇಧಿತ ಕೆಆರ್‌ಎಸ್ ಹಿನ್ನೀರಿನಲ್ಲಿ 'ಪೊಲೀಸ್ ಪಿಕ್‌ನಿಕ್ ಕುಟುಂಬದವರ ಜೊತೆ ಸರ್ಕಾರಿ ವಾಹನದಲ್ಲಿ ಬಂದಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ, ಕೆಆರ್‌ಎಸ್ ಹಿನ್ನೀರಿನಲ್ಲಿ ಶಾಮಿಯಾನ ಹಾಗೂ ಡಿಜೆ ಹಾಕಿಕೊಂಡು ನೀರಿನಲ್ಲಿ ಈಜುತ್ತಿದ್ದಾರೆ. ರೆಸಾರ್ಟ್‌ಗೆ ಹೋಗಲು ನಮಗೆ ಆಗಲ್ಲ, ಅದಕ್ಕೆ ನಾವು ಇಲ್ಲಿಗೆ ಬಂದಿದ್ದೇವೆ. ಕುಟುಂಬದ ಜೊತೆ ಎಂಜಾಯ್ ಮಾಡುತ್ತಿದ್ದೇವೆ ಅಷ್ಟೇ ಎಂದು ಪ್ರಶ್ನಿಸಿದ ಮಾದ್ಯಮದವರಿಗೆ ಪೊಲೀಸರು ಉತ್ತರ ನೀಡಿದ್ದಾರೆ.
ಸ್ಥಳೀಯರಿಗೆ ಅಣೆಕಟ್ಟಿನ ಹಿನ್ನೀರಿಗೆ ಹೋಗಲು ಅನುಮತಿ ಇಲ್ಲ. ಆದ್ರೆ ಈ ಅಧಿಕಾರಿಗಳಿಗೆ ಶಾಮಿಯಾನ ಹಾಕಿ ಡಿಜೆ ಹಚ್ಚಲು ಅನುಮತಿ ಯಾರು ನೀಡಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.