ಮಂಡ್ಯ: ಗ್ರಾಮ ಪಂಚಾಯತ್ ಚುನಾವಣೆ ಹತ್ತಿರ ಬರುತ್ತಿದ್ದು, ಅದಕ್ಕೂ ಮೊದಲೇ ಸದಸ್ಯತ್ವವನ್ನು ಹರಾಜು ಹಾಕಿದ ವಿಡಿಯೋವೊಂದು ಜಿಲ್ಲೆಯಲ್ಲಿ ಫುಲ್ ವೈರಲ್ ಆಗಿದೆ.
ನಾಗಮಂಗಲ ತಾಲೂಕಿನ ಗ್ರಾಮ ಪಂಚಾಯತ್ವೊಂದರ ವಾರ್ಡ್ನ 3 ಸದಸ್ಯ ಸ್ಥಾನಗಳ ಆಯ್ಕೆಗೆ ಹರಾಜು ಕೂಗಲಾಗಿತ್ತು. ಗ್ರಾಮದ ಅಭಿವೃದ್ಧಿ ಮತ್ತು ದೇವಸ್ಥಾನ ನಿರ್ಮಾಣಕ್ಕಾಗಿ ಹಣ ಸಂಗ್ರಹಿಸುವ ಉದ್ದೇಶದಿಂದ ಈ 3 ಸ್ಥಾನಗಳನ್ನು ಹರಾಜು ಹಾಕಲು ಪ್ರಮುಖರು ನಿರ್ಧರಿಸಿದ್ದರು ಎನ್ನಲಾಗ್ತಿದೆ.
ಈ ಸುದ್ದಿಯನ್ನೂ ಓದಿ:ರಾತ್ರೋರಾತ್ರಿ ಬಿಕರಿಯಾದ ಗ್ರಾಮ ಪಂಚಾಯತ್ ಸದಸ್ಯತ್ವ: ಪ್ರಜಾಪ್ರಭುತ್ವಕ್ಕೆ ಕಳಂಕ!
ಹೀಗಾಗಿ ಮಂಗಳವಾರ ಸಂಜೆ ಒಂದೆಡೆ ಸೇರಿ ಸದಸ್ಯ ಸ್ಥಾನದ ಆಯ್ಕೆಗೆ ಹರಾಜು ಹಾಕಿದ್ದಾರೆ. ಹಲವು ಜನರು ಪಾಲ್ಗೊಂಡು ಬಿಡ್ ಕೂಗಿದ್ದು, 1 ಲಕ್ಷ ರೂ. ನಿಂದ ಆರಂಭಗೊಂಡ ಬಿಡ್ ಅಂತಿಮವಾಗಿ 8. 40 ಲಕ್ಷ ರೂ.ವರೆಗೆ ತಲುಪಿದೆ. ಸಾಮಾನ್ಯ ವರ್ಗಕ್ಕೆ ಮೀಸಲಾದ ಸ್ಥಾನವು 8.40 ಲಕ್ಷ ರೂ.ಗೆ, ಸಾಮಾನ್ಯ ವರ್ಗದ ಮಹಿಳೆ ಸ್ಥಾನವು 5 ಲಕ್ಷ ರೂ. ಹಾಗೂ ಹಿಂದುಳಿದ ವರ್ಗ(ಎ) ಸ್ಥಾನವು 4 ಲಕ್ಷ ರೂ.ಗೆ ಬಿಡ್ ನಿಂತಿದೆ. ಮೂರು ಸ್ಥಾನಗಳು ಬರೋಬ್ಬರಿ ಒಟ್ಟು 17.40 ಲಕ್ಷ ರೂ.ಗೆ ಹರಾಜಾಗಿವೆ ಎಂದು ತಿಳಿದುಬಂದಿದೆ.
ಈ ಸುದ್ದಿಯನ್ನೂ ಓದಿ:ವೈರಲ್ ವಿಡಿಯೋ : ಗ್ರಾಮ ಪಂಚಾಯಿತಿ ಸದಸ್ಯತ್ವ ಹರಾಜು ಹಾಕಿದ ಗ್ರಾಮಸ್ಥರು..!
ಆದ್ರೆ, ಹರಾಜು ಪ್ರಕ್ರಿಯೆ ಮುಗಿಯುತ್ತಿದ್ದಂತೆ ಪರ-ವಿರೋಧದ ಚರ್ಚೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಹರಾಜನ್ನು ರದ್ದುಗೊಳಿಸಿ, ಗ್ರಾಮಸ್ಥರು ಚುನಾವಣೆ ಎದುರಿಸಲು ತೀರ್ಮಾನಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.