ಮಂಡ್ಯ:ಮಳೆರಾಯ ಮುನಿಸಿಕೊಂಡಿರುವ ಪರಿಣಾಮ ಎಲ್ಲಾ ಜಲಾಶಯಗಳು ಖಾಲಿ ಖಾಲಿಯಾಗಿವೆ. ಜೊತೆಗೆ ಬೆಳೆಗಳು ಒಣಗಲು ಆರಂಭಿಸಿವೆ. ಇನ್ನೂ ಕೆಲವು ದಿನ ಇದೇ ಪರಿಸ್ಥಿತಿ ಮುಂದುವರಿದರೆ, ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಲಿದೆ. ನಿಗದಿತ ಸಮಯಕ್ಕೆ ಮುಂಗಾರು ಮಳೆಯಾಗದೇ ಇರುವುದರಿಂದ ರೈತರು ಕಂಗಾಲಾಗಿದ್ದಾರೆ. ಉತ್ತರ ಮತ್ತು ದಕ್ಷಿಣ ಕರ್ನಾಟಕದಲ್ಲಿ ಮಳೆರಾಯ ಕೃಪೆಗಾಗಿ ವಿವಿಧ ಸಾಂಪ್ರದಾಯಿಕ ಆಚರಣೆಗಳ ಮೂಲಕ ದೇವರ ಮೊರೆ ಹೋಗಿರುವ ದೃಶ್ಯಗಳು ಕಂಡುಬರುತ್ತಿವೆ.
ಮಳೆಗಾಗಿ ಪಾರ್ಥಿಸಿ ದೇವರ ಮೊರೆ ಹೋದ ಶಾಸಕರು:ಸ್ವತಃ ಜನಪ್ರತಿನಿಧಿಗಳು ಕೂಡ ವರುಣನ ಕೃಪೆಗಾಗಿ ಪ್ರಾರ್ಥಿಸುವ ಕಾರ್ಯ ತೊಡಗಿದ್ದಾರೆ. ರಾಜ್ಯದಲ್ಲಿ ಬರಗಾಲ ಸಮೀಪಿಸುತ್ತಿದೆ. ಮುಂಗಾರು ಕೈಕೊಡುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಬೆಳೆದು ಬೆಳೆಗಳು ಕೂಡ ಒಣಗುತ್ತಿವೆ. ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ಇದನ್ನು ಮನಗಂಡು ರಾಜ್ಯಕ್ಕೆ ಏನೂ ತೊಂದರೆಯಾಗಬಾರದು, ಅಣೆಕಟ್ಟೆಗಳು ತುಂಬಬೇಕು, ಮಳೆರಾಯ ಕೃಪೆ ತೋರಲಿ ಎಂದು ಮಂಗಳವಾರ ಶ್ರೀರಂಗಪಟ್ಟಣ ಶಾಸಕ ರಮೇಶಬಾಬು ಬಂಡಿಸಿದ್ದೇಗೌಡ ಅವರು ಕೆಆರ್ಎಸ್ ಜಲಾಶಯದ ಕಾವೇರಿ ಬಲ ಪ್ರತಿಮೆ ಎದುರು ವಿಶೇಷ ಪೂಜೆ ಪುನಸ್ಕಾರ ಸೇರಿದಂತೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಶಾಸಕರು ಪೂಜೆಯಲ್ಲಿ ಕುಳಿತು ವರುಣನ ಆಗಮನವಾಗಲೆಂದು ಬೇಡಿಕೊಂಡ ದೃಶ್ಯ ಕಂಡುಬಂತು.
ಪರ್ಜನ್ಯ ಜಪ, ಹೋಮ:ಡಾ. ಭಾನುಪ್ರಕಾಶ ಶರ್ಮಾ ಅವರ ನೇತೃತ್ವದಲ್ಲಿ 12 ವೈದಿಕರ ತಂಡದಿಂದ ವಿಶೇಷ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಪರ್ಜನ್ಯ ಜಪ, ಹೋಮ, ಕಳಶ ಸ್ಥಾಪನೆ, ಮಹಾ ಗಣಪತಿ ಪೂಜೆ, ಪುಣ್ಯಹಾದಿ, ಆದಿತ್ಯ ಪೂಜೆ, ಮಳೆ ದೇವತೆಗಳ ಆಹ್ವಾಹನೆ, ರುದ್ರಾಭಿಷೇಕ, ಗಂಗಾಪೂಜೆ ಹಾಗೂ ಮೂಲ ಮಂತ್ರಗಳನ್ನು ಜಪಿಸಲಾಯ್ತು.