ಮಂಡ್ಯ :ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬನಘಟ್ಟ ಬಳಿ ವಿಸಿ ನಾಲೆ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶೀಲನೆ ವೇಳೆ ಘಟನಾ ಸ್ಥಳದಲ್ಲಿ ನಡೆಯಲಿದ್ದ ಮತ್ತೊಂದು ದುರಂತ ತಪ್ಪಿದೆ. ಘಟನೆ ನಡೆದ ಸ್ಥಳಕ್ಕೆ ಅಧಿಕಾರಿಗಳು ಜೊತೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಭೇಟಿ ನೀಡಿ ಪರಿಶೀಲನೆ ನಡೆಸುವ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು. ಇದನ್ನು ನೋಡಿ ಬೆದರಿದ ಎತ್ತುಗಳು ಗಾಡಿ ಸಮೇತ ಜನರ ಮೇಲೆ ನುಗ್ಗಿವೆ.
ಅಷ್ಟಕ್ಕೂ ಅಲ್ಲಿ ಆಗಿದ್ದೇನು: ರೈತ ಸ್ವಾಮಿಗೌಡ ಎಂಬುವರು ಪಾಂಡವಪುರ ಕಡೆಯಿಂದ ಬೇವಿನ ಕುಪ್ಪೆ ಕಡೆಗೆ ಎತ್ತಿನಗಾಡಿ ಹೊಡೆದುಕೊಂಡು ಹೋಗುತ್ತಿದ್ದರು. ಮಾರ್ಗಮಧ್ಯೆ ವಿಸಿ ನಾಲೆ ಸೇತುವೆ ಮೇಲೆ ಬರುತ್ತಿದ್ದಂತೆ ಜನರನ್ನು ನೋಡಿ ಬೆದರಿದ ಎತ್ತುಗಳು ಏಕಾಏಕಿ ಗಾಡಿ ಸಮೇತ ನಾಲೆಯತ್ತ ನುಗ್ಗಿ ಬಂದವು. ಈ ವೇಳೆ ನಾಲೆಗೆ ಬೀಳುವುದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಗಾಬರಿಯಿಂದ ಬೆದರಿ ನಿಂತ ಎತ್ತುಗಳನ್ನು ನಿಯಂತ್ರಿಸಲು ಅಲ್ಲಿದ್ದ ಜನರು ಹರಸಾಹಸ ಪಟ್ಟಿದ್ದಾರೆ.
ಕಡೆಗೂ ಎತ್ತುಗಳನ್ನು ನಿಯಂತ್ರಿಸುವಲ್ಲಿ ವಿಫಲವಾದ ಜನರು ಗಾಡಿಯಿಂದ ಬಿಚ್ಚುತ್ತಿದ್ದಂತೆ ಅಷ್ಟೇ ವೇಗವಾಗಿ ಮತ್ತೆ ಅವು ಓಡಿವೆ. ಇನ್ನು, ಅಲ್ಲೇ ಇದ್ದ ಶಾಸಕ ದರ್ಶನ್ ಪುಟ್ಟಣಯ್ಯ ಸಮೀಪವೇ ಘಟನೆ ಜರುಗಿದೆ. ಇನ್ನೊಂದೆಡೆ ಓಡಿ ಹೋಗುತ್ತಿದ್ದ ಎತ್ತುಗಳನ್ನು ಹಿಡಿಯಲು ಹೋಗಿ ರಸ್ತೆಯಲ್ಲೇ ಅಧಿಕಾರಿಯೊಬ್ಬರು ಬಿದ್ದಿದ್ದಾರೆ.