ಮಂಡ್ಯ: ಲೋಕ ಸಭಾ ಚುನಾವಣೆ ವೇಳೆ ನಮ್ಮ ಕುಟುಂಬದ ಪೋನ್‌ಗಳು ಕದ್ದಾಲಿಕೆ ಆಗಿವೆ, ಇದರಿಂದ ನಮ್ಮ ಕುಟುಂಬ ಹಿಂಸೆ ಅನುಭವಿಸಿದೆ ಎಂದು ಮಾಜಿ ಸಚಿವ ಸಿ.ಎಸ್ ಪುಟ್ಟರಾಜು ಹೊಸ ಬಾಂಬ್ ಸಿಡಿಸಿದ್ದಾರೆ.
ನಮ್ಮ ಕುಟುಂಬದ ಪೋನ್ ಕೂಡ ಕದ್ದಾಲಿಕೆ ಆಗಿತ್ತು: ಮಾಜಿ ಸಚಿವ ಪುಟ್ಟರಾಜು
ಮೈತ್ರಿ ಸರ್ಕಾರದ ಅವಧಿಯಲ್ಲಿ ಉನ್ನತ ಅಧಿಕಾರಿಗಳು ಮತ್ತು ರಾಜಕಾರಣಿಗಳ ಪೋನ್ ಕದ್ದಾಲಿಕೆ ಆಗಿತ್ತು ಎಂಬ ವಿಚಾರ ರಾಜ್ಯದಲ್ಲಿ ಧಗಧಗಿಸುತ್ತಿರುವ ಮಧ್ಯೆಯೇ ಮಾಜಿ ಸಚಿವ ಸಿ.ಎಸ್ ಪುಟ್ಟರಾಜು ಹೊಸ ಬಾಂಬ್ ಸಿಡಿಸಿದ್ದು, ಲೋಕಸಭಾ ಚುನಾವಣೆ ವೇಳೆ ನಮ್ಮ ಕುಟುಂಬದ ಫೋನ್ ಕೂಡ ಕದ್ದಾಲಿಕೆ ಅಗಿತ್ತು ಎಂದು ಹೇಳುವ ಮೂಲಕ ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿ, ಮೈತ್ರಿ ಸರ್ಕಾರದ ಅವಧಿಯಲ್ಲಿ ಫೋನ್ ಕದ್ದಾಲಿಕೆ ಮಾಡಲಾಗಿದೆ ಎಂದು ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ. ಆದರೆ ಲೋಕಸಭಾ ಚುನಾವಣಾ ವೇಳೆ ಕೇಂದ್ರ ಸರ್ಕಾರ ಹಾಗೂ ರಾಜ್ಯದ ಕೆಲವು ಬಿಜೆಪಿ ನಾಯಕರು ನನ್ನ ಕುಟುಂಬದ ಫೋನ್ ಕದ್ದಾಲಿಕೆ ಮಾಡಿದ್ದರು. ಇದರಿಂದ ನಾನು ನನ್ನ ಕುಟುಂಬ ಚಿತ್ರ ಹಿಂಸೆಗೆ ಒಳಗಾಗಿದ್ದೆವು. ಆದ್ದರಿಂದ ಫೋನ್ ಕದ್ದಾಲಿಕೆ ಪ್ರಕರಣವನ್ನು ಸರಿಯಾದ ರೀತಿಯಲ್ಲಿ ತನಿಖೆ ನಡೆಸಲು ಒತ್ತಾಯಿಸುತ್ತೇನೆ ಎಂದರು.
ಮೈತ್ರಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಫೋನ್ ಕದ್ದಾಲಿಕೆ ಪ್ರಕರಣದ ದಿಕ್ಕನ್ನೇ ಬದಲಿಸಿದ ಮಾಜಿ ಸಚಿವ ಸಿಎಸ್ ಪುಟ್ಟರಾಜು, ನೇರ ಕೇಂದ್ರದತ್ತ ಬೆರಳು ಮಾಡಿದ್ದಾರೆ. ಈಗ ಸಿಬಿಐ, ಸಿಐಡಿ, ಎಸ್‌ಐಟಿ ಎಲ್ಲಾ ಕೇಂದ್ರ ಸರ್ಕಾರದ ಕೈಯಲ್ಲೇ ಇದೆ. ಪ್ರಕರಣವನ್ನು ಸರ್ಕಾರ ತನಿಖೆಗೆ ಒಳಪಡಿಸಲಿ. ಯಾರೆಲ್ಲ ಫೋನ್ ಕದ್ದಾಲಿಕೆಯಲ್ಲಿ ಭಾಗಿಯಾಗಿದ್ದಾರೆ ಅನ್ನುವುದು ಆಗ ತಿಳಿಯಲಿದೆ. ನಮ್ಮ ಶಾಸಕರನ್ನು 20-30 ಕೋಟಿ ಕೊಟ್ಟು ಹೊತ್ತೊಯ್ದ ಸತ್ಯವೂ ತನಿಖೆಯಿಂದ ಹೊರಬರಲಿದೆ ಎಂದರು.