ಮಂಡ್ಯ:ಕನ್ನಡ ನಟಿ ರಚಿತಾ ರಾಮ್ ಅವರು 'ಕ್ರಾಂತಿ' ಸಿನಿಮಾ ಪ್ರಚಾರದ ಸಂದರ್ಭದಲ್ಲಿ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. "ಜನವರಿ 26 ರಂದು ಕ್ರಾಂತಿ ಬಿಡುಗಡೆಯಾಗಲಿದೆ. ಆ ದಿನದಂದು ಗಣರಾಜ್ಯೋತ್ಸವ ಮರೆತು ಕ್ರಾಂತಿಯೋತ್ಸವ ಮಾಡಿ" ಎಂದು ಅವರು ಅಭಿಮಾನಿಗಳಿಗೆ ಹೇಳಿದ್ದರು. ಈ ಕುರಿತು ಇತ್ತೀಚೆಗೆ ನಟಿ ವಿರುದ್ಧ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಮದ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. ಇದೀಗ ಡಾ.ಬಿ.ಆರ್.ಅಂಬೇಡ್ಕರ್ ಸೈನ್ಯದ ಜಿಲ್ಲಾಧ್ಯಕ್ಷ ಎ.ಸಿದ್ದರಾಜು ನೇತೃತ್ವದಲ್ಲಿ ಮಳವಳ್ಳಿ ಪಟ್ಟಣ ಠಾಣೆಗೆ ದೂರು ನೀಡಲಾಗಿದೆ.
"ಸಿನಿಮಾ ಪ್ರಚಾರ ಸಭೆಯಲ್ಲಿ ಸಂವಿಧಾನ ವಿರೋಧಿಯಾಗಿ ಅವರು ಗಣರಾಜ್ಯೋತ್ಸವಕ್ಕೆ ಅಪಮಾನ ಮಾಡಿದ್ದಾರೆ. ಈ ಕೂಡಲೇ ಬಹಿರಂಗ ಕ್ಷಮೆಯಾಚನೆ ಮಾಡಬೇಕು" ಎಂದು ಅವರು ಒತ್ತಾಯಿಸಿದ್ದಾರೆ. ಇದೇ ವೇಳೆ ನಟಿ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲು ಆಗ್ರಹಿಸಿದ್ದಾರೆ.