ಅಕ್ರಮ ಮರಳು ಅಡ್ಡೆಗಳ ಮೇಲೆ ಅಧಿಕಾರಿಗಳ ದಾಳಿ ಮಂಡ್ಯ: ಜಿಲ್ಲೆಯ ಜೀವನಾಡಿಗಳಲ್ಲಿ ಒಂದಾದ ಶಿಂಷಾ ನದಿಯಲ್ಲಿ ಅಕ್ರಮವಾಗಿ ಮರಳು ದಂಧೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಿಢೀರ್ ದಾಳಿ ಮಾಡಿದ ಮಂಡ್ಯ ಉಪ ವಿಭಾಗಾಧಿಕಾರಿ ಹೆಚ್ ಎಸ್ ಕೀರ್ತನಾ ಅಪಾರ ಪ್ರಮಾಣದ ಮರಳನ್ನು ವಶಪಡಿಸಿಕೊಂಡಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆ.ಕೋಡಿಹಳ್ಳಿ ಗ್ರಾಮದಲ್ಲಿ ಹಾಡಹಗಲೇ ನಡೆಯುತ್ತಿದ್ದ ಅಕ್ರಮ ಮರಳು ಅಡ್ಡೆ ಮೇಲೆ ದಿಢೀರ್ ದಾಳಿ ನಡೆಸಿದ ವೇಳೆ ದಂಧೆಕೋರರು ಪರಾರಿಯಾಗಿದ್ದು, ಮರಳನ್ನು ತೆಗೆಯುತ್ತಿದ್ದ 10ಕ್ಕೂ ಹೆಚ್ಚು ಕೊಪ್ಪರಿಕೆಗಳನ್ನು ನದಿಯಿಂದ ಹೊರ ತೆಗೆದು ವಶಕ್ಕೆ ತೆಗೆದುಕೊಳ್ಳಲಾಗಿದೆ. ಕಳೆದ ವರ್ಷ ಸುರಿದ ಭಾರಿ ಮಳೆಯಿಂದಾಗಿ ಶಿಂಷಾ ನದಿ ಒಂದು ವರ್ಷಕ್ಕೂ ಹೆಚ್ಚು ಕಾಲ ಉಕ್ಕಿ ಹರಿದ ಪರಿಣಾಮ ಅಪಾರ ಪ್ರಮಾಣದ ಮರಳು ಹರಿದು ಬಂದು ಶೇಖರಣೆಗೊಂಡಿತ್ತು.
ಶಿಂಷಾ ನದಿ ಪಾತ್ರದಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದರೂ ದಂಧೆಕೋರರು ಅಕ್ರಮವಾಗಿ ಮರಳು ದಂಧೆ ನಡೆಸುತ್ತಿದ್ದರು. ಕಳೆದ 6 ತಿಂಗಳಿನಿಂದ ಸಾಕಷ್ಟು ಪ್ರಮಾಣದ ಮರಳು ಹೊರ ಜಿಲ್ಲೆಗಳಿಗೂ ಸಾಗಣೆ ಮಾಡುತ್ತಿದ್ದರೂ ಸಹ ಸಂಬಂಧ ಪಟ್ಟ ಇಲಾಖೆಗಳು ಕಣ್ಮುಚ್ಚಿ ಕುಳಿತಿದ್ದವು. ಸಿಬ್ಬಂದಿ ಕೊರತೆಯ ನಡುವೆಯೂ ಆಗಾಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕೆಲವೊಂದು ಕಡೆ ದಿಢೀರ್ ದಾಳಿ ಮಾಡಿ ಮರಳನ್ನು ವಶಪಡಿಸಿಕೊಂಡು ನದಿಗೆ ಹೋಗುತ್ತಿದ್ದ ರಸ್ತೆಗಳನ್ನು ಬಂದ್ ಮಾಡುತ್ತಿದ್ದರು.
ಇದಾದ ಕೆಲ ಗಂಟೆಗಳಲ್ಲೇ ರಸ್ತೆ ತೆರವುಗೊಳಿಸಿ ಮತ್ತೆ ಅಕ್ರಮವಾಗಿ ಮರಳು ದಂಧೆ ಎಂದಿನಂತೆ ನಡೆಯುತ್ತಿದ್ದರೂ, ತಾಲೂಕು ಆಡಳಿತ ಮಾತ್ರ ನಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದದ್ದು ಮಾತ್ರ ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಮಂಡ್ಯ ಉಪ ವಿಭಾಗಾಧಿಕಾರಿ ಹೆಚ್ ಎಸ್ ಕೀರ್ತನಾ ನೇತೃತ್ವದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ಜೊತೆಗೂಡಿ ದಾಳಿ ಮಾಡಿ ಅಂದಾಜು 20 ಟಿಪ್ಪರ್ಗಳಿಗೂ ಹೆಚ್ಚು ಮರಳನ್ನು ವಶಪಡಿಸಿಕೊಂಡು ದಂಧೆಕೋರರ ಮೈ ಚಳಿ ಬಿಡಿಸಿದ್ದಾರೆ.
ಇನ್ನು ಅಕ್ರಮವಾಗಿ ಮರಳನ್ನು ಶೇಖರಣೆ ಮಾಡಿದ್ದ ಜಮೀನು ಮಾಲೀಕರು ಹಾಗೂ ದಂಧೆಕೋರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವಂತೆ ಮದ್ದೂರು ಪೊಲೀಸರಿಗೆ ಉಪ ವಿಭಾಗಾಧಿಕಾರಿ ಹೆಚ್ ಎಸ್ ಕೀರ್ತನಾ ಸೂಚನೆ ನೀಡಿದ್ದಾರೆ. ಪ್ರಕೃತಿಯನ್ನು ಕಾಪಾಡುವುದು ನಮ್ಮೆಲ್ಲರ ಹೊಣೆಯಾಗಿದೆ. ನದಿಯಲ್ಲಿ ಅಕ್ರಮವಾಗಿ ಮರಳನ್ನು ತೆಗೆಯುವುದು ಕಾನೂನು ಬಾಹಿರ ಹೀಗಾಗಿ ಮುಂದಿನ ದಿನಗಳಲ್ಲಿ ದಂಧೆಯನ್ನು ತಡೆಗಟ್ಟಲು ಸಾರ್ವಜನಿಕರ ಸಹಯೋಗದೊಂದಿಗೆ ಹಾಗೂ ಸಂಬಂಧ ಪಟ್ಟ ಇಲಾಖೆಗಳ ಜೊತೆಗೂಡಿ ಕಾರ್ಯಾಚರಣೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೀರ್ತನಾ ಎಚ್ಚರಿಕೆ ನೀಡಿದರು.
ಕಾರ್ಯಾಚರಣೆ ವೇಳೆ ರಾಜಸ್ವ ನಿರೀಕ್ಷಕ ಜಗದೀಶ್, ಜಯರಾಂ ಸಬ್ ಇನ್ಸ್ಪೆಕ್ಟರ್ಗಳಾದ ಆರ್.ಬಿ. ಉಮೇಶ್, ನರೇಶ್ ಗ್ರಾಮ ಲೆಕ್ಕಾಧಿಕಾರಿಗಳಾದ ಸುಷ್ಮಾ, ಪುಟ್ಟು, ರಸೂಲ್, ಪರಶುರಾಂ, ದೇವೇಂದ್ರಪ್ಪ, ಪಿಡಿಓ ಸತೀಶ್, ಗಣಿ, ಪೋಲೀಸ್, ಕಂದಾಯ, ಗ್ರಾಮ ಪಂಚಾಯಿತಿ ಸಿಬ್ಬಂದಿ ಇದ್ದರು.
ಇದನ್ನೂ ಓದಿ:ಅಜ್ಜಾವರದಲ್ಲಿ ಕಿರಿಯ ಅಧಿಕಾರಿಗಳಿಂದ ಮಿಂಚಿನ ಕಾರ್ಯಾಚರಣೆ.. ನೂರು ಲೋಡ್ ಅಕ್ರಮ ಮರಳು ವಶ