ಮಂಡ್ಯ: ರಾಜ್ಯದಲ್ಲಿ ಉಪಮುಖ್ಯಮಂತ್ರಿಯಾಗಿರುವ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಶಾಸಕ ಕದಲೂರು ಉದಯ್ ತಿಳಿಸಿದರು. ಮದ್ದೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಆಯ್ಕೆಗೆ ತನ್ನದೇ ಆದ ಮಾನದಂಡ ಇರುತ್ತದೆ. ಅದಕ್ಕೆ ಅನುಗುಣವಾಗಿ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದರು.
ಯಾರೋ ಹೇಳಿಕೆ ನೀಡಿದಾಕ್ಷಣ, ಹೇಳಿದರೆಂಬ ಕಾರಣಕ್ಕೆ ಮುಖ್ಯಮಂತ್ರಿಯಾಗುವುದಿಲ್ಲ. ದಲಿತರು ಮುಖ್ಯಮಂತ್ರಿ ಆಗಲು ಈ ಹಿಂದೆ ಅವಕಾಶ ಇತ್ತು. ದಲಿತರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವ ಬಗ್ಗೆ ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಂಡಿದೆ ಎಂಬುದು ಗೊತ್ತಿಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವುದರ ಜೊತೆಗೆ ಸ್ವಸಾಮರ್ಥ್ಯದಿಂದ ಶ್ರಮಪಟ್ಟು ಮೇಲ್ಮಟ್ಟಕ್ಕೆ ಡಿ ಕೆ ಶಿವಕುಮಾರ್ ಬೆಳೆದಿದ್ದಾರೆ. ಅವರಿಗೆ ಮುಖ್ಯಮಂತ್ರಿ ಸ್ಥಾನ ದೊರೆತರೆ ಪಕ್ಷವನ್ನು ಮತ್ತಷ್ಟು ಪ್ರಬಲವಾಗಿ ಸಂಘಟಿಸಲಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷರಾದ ಮೇಲೆ ಬಹಳಷ್ಟು ಪರಿಣಾಮಕಾರಿಯಾಗಿ ಸಂಘಟನೆ ಮಾಡಿದ್ದಾರೆ. ಹಾಗಾಗಿ ಅವರಿಗೂ ಮುಖ್ಯಮಂತ್ರಿ ಸ್ಥಾನ ದೊರಕಬೇಕು ಎಂಬುದು ನಮ್ಮೆಲ್ಲರ ಆಸೆಯಾಗಿದೆ ಎಂದರು.
ಮುಖ್ಯಮಂತ್ರಿ ವಿಚಾರವಾಗಿ ಅಂತಿಮ ನಿರ್ಧಾರ ಹೈಕಮಾಂಡ್ ಕೈಗೊಳ್ಳಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮವಾದ ಆಡಳಿತ ನೀಡುತ್ತಿದ್ದು, ಸರ್ಕಾರವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಎಸ್ ಎಂ ಕೃಷ್ಣ ಸುದೀರ್ಘ ಆಳ್ವಿಕೆ ನಂತರ ಸಿದ್ದರಾಮಯ್ಯ ಪೂರ್ಣಾವಧಿ ಅಧಿಕಾರ ಪೂರೈಸಿದ್ದರು. ಅವರ ಅನುಭವದ ಆಡಳಿತವನ್ನು ಇದೀಗ ಕಾಣುತ್ತಿದ್ದೇವೆ. ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು. ಅದು ನಮ್ಮ ಆಸೆ. ಬೇರೆಯವರು ಮುಖ್ಯಮಂತ್ರಿ ವಿಚಾರವಾಗಿ ಬಾಯಿ ತಪ್ಪಿ ಆಡಿರುವ ಮಾತನ್ನು ದೊಡ್ಡದು ಮಾಡಬಾರದೆಂದು ಹೇಳಿದರು.
ವ್ಯಂಗ್ಯ ಹೇಳಿಕೆಗಳಿಗೆ ಉತ್ತರ ನೀಡುವುದಿಲ್ಲ: ಇನ್ನೊಂದೆಡೆ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವುದಾದರೆ ಜೆಡಿಎಸ್ ಶಾಸಕರ ಬೆಂಬಲ ನೀಡುತ್ತೇವೆ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ಇಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಕುಮಾರಸ್ವಾಮಿ ವ್ಯಂಗ್ಯವಾಗಿ ಹೇಳಿದ್ದಾರೆ. ಅದಕ್ಕೆಲ್ಲ ನಾನು ಉತ್ತರ ಕೊಡುವುದಿಲ್ಲ. ನೀವು ಬೆಂಬಲ ಕೊಡುವುದಾದರೆ ಎನ್ಡಿಎ ಬಿಟ್ಟು ಬನ್ನಿ ಎಂದು ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ನಾನು ಏನು ಹೇಳುವುದಿಲ್ಲ ಎಂದಿದ್ದಾರೆ.
ಜೊತೆಗೆ ಸಿಎಂ ಬದಲಾವಣೆ ಮಾತಿನ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬಿಜೆಪಿ, ಜೆಡಿಎಸ್ನವರು ಸೋತು ಹತಾಶರಾಗಿದ್ದಾರೆ. ಸೋಲಿನ ಹತಾಶೆಯಿಂದ ಏನೇನೋ ಮಾತನಾಡುತ್ತಿದ್ದಾರೆ. ಸರ್ಕಾರ ಸುಭದ್ರವಾಗಿದೆ. ನಮ್ಮ ಮಂತ್ರಿಗಳು ಏನೇನೋ ಹೇಳಿಕೆಗಳನ್ನು ನೀಡುತ್ತಿದ್ದರಿಂದ ನಿನ್ನೆ ಸಭೆ ಮಾಡಿದ್ದೇವೆ. ಸುಮ್ಮನೆ ಹೇಳಿಕೆ ಕೊಡಬೇಡಿ. ನಿಮ್ಮ ಇಲಾಖೆಯ ಕಡೆ ಗಮನಹರಿಸಿ ಎಂದು ಸೂಚಿಸಿರುವುದಾಗಿ ತಿಳಿಸಿದರು.
ಇದನ್ನೂ ಓದಿ:ಹೆಚ್ಡಿಕೆ ಎನ್ಡಿಎಯಿಂದ ಆಚೆ ಬಂದು ನನಗೆ ಬೆಂಬಲ ನೀಡುವ ಬಗ್ಗೆ ಮಾತನಾಡಲಿ: ಶಿವಕುಮಾರ್ ಡಿಚ್ಚಿ