ಮಂಡ್ಯ ಲೋಕಸಭೆ ಕ್ಷೇತ್ರದ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಣದಲ್ಲಿರುವ ಅಭ್ಯರ್ಥಿಗಳ ಪ್ರಚಾರ ಕಾರ್ಯ ಅಬ್ಬರದಿಂದ ಸಾಗಿದೆ. ಅದರಲ್ಲೂ ಪಕ್ಷೇತರ ಅಭ್ಯರ್ಥಿ ಸುಮಲತಾ ಹಾಗೂ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಇಬ್ಬರೂ ನೀನಾ, ನಾನಾ ಎಂಬಂತೆ ಮತಸಮರದಲ್ಲಿ ನಿರತರಾಗಿದ್ದಾರೆ.
ಮತ ಸೆಳೆಯಲು ನಿಖಿಲ್ ವಿನೂತನ ಪ್ರಚಾರ ತಂತ್ರ - undefined
ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ನಾನಾ ಕಸರತ್ತು ನಡೆಸುತ್ತಿದ್ದು ಇಂದು ಮಂಡ್ಯ ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅಂಬರೀಶ್, ವಿಷ್ಣುವರ್ಧನ್ ಒಟ್ಟಿಗಿನ ಫೋಟೋ ಇರುವ ಎತ್ತಿನಬಂಡಿ ಏರಿ ಮತಯಾಚನೆ ಮಾಡಿದರು.
ಚಿಕ್ಕ ಮಂಡ್ಯ ಸೇರಿದಂತೆ ಸುತ್ತಮುತ್ತ ಚುನಾವಣಾ ಪ್ರಚಾರ ಕೈಗೊಂಡಿದ್ದ ಅವರು, ಡಾ.ವಿಷ್ಣುವರ್ಧನ್ ಹಾಗೂ ಅಂಬರೀಶ್ ಒಟ್ಟಿಗಿನ ಫೋಟೋ ಇರುವ ಎತ್ತಿನಬಂಡಿ ಮೇಲೆ ಹೊರಟು ಮತದಾರರ ಮನವೊಲಿಸಿದರು. ಇದು ಎಲ್ಲರ ಕುತೂಹಲಕ್ಕೆ ಕಾರಣವಾಯಿತು.
ಕೆಲವು ದಿನಗಳ ಹಿಂದೆ ಚುನಾವಣಾ ಪ್ರಚಾರ ಮಾಡುತ್ತಿದ್ದ ವೇಳೆ 'ಅಂಬರೀಶ್ ಅಂಕಲ್ ಬದುಕಿದ್ದಿದ್ದರೆ ನನ್ನ ಪರವಾಗಿ ಮತ ಕೇಳುತ್ತಿದ್ದರು ಎಂದು ಅವರು ಹೇಳಿದ್ದರು. ಇದೀಗ ಅಂಬರೀಶ್ ಹಾಗೂ ವಿಷ್ಣುವರ್ಧನ್ ಭಾವಚಿತ್ರವಿರುವ ಎತ್ತಿನ ಗಾಡಿಯನ್ನು ಪ್ರಚಾರಕ್ಕೆ ಬಳಸಿದ್ದು, ಅಂಬಿ ಹಾಗೂ ವಿಷ್ಣು ಅಭಿಮಾನಿಗಳನ್ನು ತನ್ನತ್ತ ಸೆಳೆಯಲು ಪ್ಲ್ಯಾನ್ ಮಾಡುತ್ತಿರಬಹುದು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.