ಮಂಡ್ಯ :ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿಯವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ಹೇಳಿಕೆಗೆ ತಿರುಗೇಟು ನೀಡಿದರು.
ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದ ಕಾಳಿಕಾಂಭ ವಿದ್ಯಾಸಂಸ್ಥೆಯ ನೂತನ ಕಟ್ಟಡ ಉದ್ಘಾಟಿಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದದ ಅವರು, ಸಿದ್ದರಾಮಯ್ಯನವರು ಜೆಡಿಎಸ್ ಅನ್ನು ಜೆಡಿಎಫ್ ಅನ್ನೋದಾದರೆ ಅವರ ಮಗನೂ ಶಾಸಕ ಅಲ್ವಾ, ಅವರು ವೈದ್ಯರಾಗಿ ರಾಜಕಾರಣಕ್ಕೆ ಯಾಕೆ ಬಂದರು ಎಂದು ನಾವು ಕೇಳಬಹುದಲ್ವಾ, ಚರ್ಚೆ ಮಾಡಿಕೊಂಡು ಕೂತರೆ ಸಾಕಷ್ಟು ವಿಷಯಗಳಿವೆ ಎಂದು ತಿರುಗೇಟು ನೀಡಿದರು.
ಯಾರನ್ನೋ ಮೆಚ್ಚಿಸಲು ಜಮೀರ್ ಈ ರೀತಿ ಮಾತನಾಡುತ್ತಿದ್ದಾರೆ :ಕುಮಾರಸ್ವಾಮಿ ವಿರುದ್ಧ ಜಮೀರ್ ವಾಗ್ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಪದೇಪದೆ ಅದೇ ವಿಚಾರವಾಗಿ ಚರ್ಚೆ ಮಾಡುವುದು ಸೂಕ್ತವಲ್ಲ. ರಾಜ್ಯದ ಜನತೆಗೆ ತಪ್ಪು ಸಂದೇಶವನ್ನು ನೀಡುತ್ತಿದ್ದಾರೆ.
ಯಾರನ್ನೋ ಮೆಚ್ಚಿಸಲು ಈ ರೀತಿ ಮಾತನಾಡುತ್ತಿದ್ದಾರೆ. ಇದನ್ನು ಹೀಗೆ ಮುಂದುವರೆಸಿಕೊಂಡು ಹೋದರೆ ನಗೆಪಾಟಲು ಆಗುತ್ತದೆ. ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಸರಿಯಾದ ಸಮಯದಲ್ಲಿ ಸರಿಯಾದ ತೀರ್ಪು ನೀಡುತ್ತಾರೆ ಎಂದರು.
ನನ್ನ ಸ್ಪರ್ಧೆ ಮುಖ್ಯ ಅಲ್ಲ, ನಮ್ಮ ಪಕ್ಷ 2023ಕ್ಕೆ ಜನರಿಗೆ ಕೊಡುವ ಕಾರ್ಯಕ್ರಮ ಮುಖ್ಯ :ಮುಂದಿನ ಚುನಾವಣೆಯಲ್ಲಿ ನಿಖಿಲ್ ರಾಮನಗರದಲ್ಲಿ ಸ್ಪರ್ಧೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಸ್ಪರ್ಧೆ ಮಾಡುವ ವಿಚಾರದ ಬಗ್ಗೆ ಮುಂದೆ ಮಾತನಾಡುತ್ತೇನೆ. ನಾನು ರಾಮನಗರದಲ್ಲಿ, ಮಂಡ್ಯದಲ್ಲಿ ಸ್ಪರ್ಧೆ ಮಾಡುತ್ತೇನೆ ಎನ್ನುವ ವಿಚಾರ ಅಲ್ಲ.
ನಮ್ಮ ಪಕ್ಷ 2023ಕ್ಕೆ ಕೊಡುವ ಕಾರ್ಯಕ್ರಮಗಳನ್ನು ಜನರಿಗೆ ಮನವರಿಕೆ ಮಾಡಬೇಕು. ಹೀಗಾಗಿ, ಮುಂದಿನ ಬಾರಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ನಾನು ಹೋರಾಟ ನಡೆಸುತ್ತೇನೆ ಎಂದರು. ರಾಮನಗರ ಅಥವಾ ಮಂಡ್ಯದಲ್ಲಿ ಸ್ಪರ್ಧೆ ಮಾಡೋದನ್ನ ಮುಂದೆ ನಿರ್ಧಾರ ಮಾತನಾಡುತ್ತೇನೆ. ಕ್ಷೇತ್ರ ಬದಲಾವಣೆ ಮಾಡುವ ವಿಚಾರದ ಬಗ್ಗೆ ಈಗ ಮಾತನಾಡುವುದು ಸೂಕ್ತ ಅಲ್ಲ ಎಂದರು.
ಸಿಂದಗಿ ಉಪ ಚುನಾವಣೆ ಹಿನ್ನೆಲೆ ವಿಜಯಪುರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಸಿದ್ದರಾಮಯ್ಯನವರು ಅಪ್ಪ, ಮಕ್ಕಳು, ಮೊಮ್ಮಕ್ಕಳ ಕುಟುಂಬ ರಾಜಕಾರಣಕ್ಕೆ ಸೀಮಿತವಾಗಿರುವ ಜೆಡಿಎಸ್ ಅನ್ನು ಇನ್ನು ಮುಂದೆ ಜೆಡಿಎಫ್ (ಫ್ಯಾಮಿಲಿ) ಎಂದು ಕರೆಯುವುದು ಉತ್ತಮ ಎಂದು ವ್ಯಾಖ್ಯಾನಿಸಿದ್ದರು.
ಇದನ್ನೂ ಓದಿ: ಬಿಟ್‌ಕ್ವಾಯಿನ್ ಮಾಫಿಯಾದಲ್ಲಿ ಬಿಜೆಪಿಯವರ ಪಾತ್ರವಿದೆ.. ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ