ಮಂಡ್ಯ: ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳ ಜೊತೆಗೂಡಿ ಇಂದು ನಾಗಮಂಗಲ ಕ್ಷೇತ್ರದಲ್ಲಿ ಭರ್ಜರಿಯಾಗಿಯೇ ಪ್ರಚಾರ ಕಾರ್ಯ ಆರಂಭ ಮಾಡಿದ್ದಾರೆ.
ನಿಖಿಲ್ ಕೊಪ್ಪದ ಗ್ರಾಮ ದೇವತೆ ಪಟ್ಟಲದಮ್ಮ ಹಾಗೂ ಆಬಲವಾಡಿಯ ತೋಪಿನ ತಿಮ್ಮಪ್ಪ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡರು. ಸಚಿವ ಡಿ.ಸಿ.ತಮ್ಮಣ್ಣ, ಸಂಸದ ಶಿವರಾಮೇಗೌಡ, ಶಾಸಕರಾದ ಸುರೇಶ್ ಗೌಡ, ಕೆ.ಟಿ.ಶ್ರೀಕಂಠೇಗೌಡ, ಅಪ್ಪಾಜಿಗೌಡ ಈ ವೇಳೆ ಜೆಡಿಎಸ್ ಅಭ್ಯರ್ಥಿಗೆ ಸಾಥ್ ನೀಡಿದರು.
ಸಭೆಯಲ್ಲಿ ಮಾತನಾಡಿದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ, ಮೊನ್ನೆ ನಡೆದ ಸಭೆಯಲ್ಲಿ ನನ್ನನ್ನು ಬಹಿರಂಗವಾಗಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸಿದ್ದಾರೆ. ನನ್ನ ಕನಸಿನಲ್ಲೂ ನನಗೆ ಅಭ್ಯರ್ಥಿಯಾಗುವ ಬಗ್ಗೆ ಮಾಹಿತಿ ಇರಲಿಲ್ಲ. ಶಾಸಕರ ಒತ್ತಾಯದ ಮೇರೆಗೆ ಪಕ್ಷ ನನಗೆ ಟಿಕೆಟ್ ನೀಡಿದೆ. ನಿಮ್ಮ ಸೇವೆ ಮಾಡೋ ಅವಕಾಶ ಕೊಡ್ತೀರಾ ಅಂತಾ ಇಲ್ಲಿಗೆ ಬಂದಿದ್ದೇನೆ ಎಂದರು.
ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ರಾಮನ ಪಾತ್ರ ಕೊಟ್ಟರೂ ಮಾಡ್ತೀನಿ, ನಕುಲನ ಪಾತ್ರ ಕೊಟ್ಟರೂ ಮಾಡ್ತೀನಿ. ನನ್ನ ಕೊನೆಯುಸಿರು ಇರೋವರೆಗೂ ನಿಮ್ಮ ಜೊತೆ ಇರ್ತೀನಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗ ಇಡೀ ದೇಶವೇ ತಿರುಗಿ ನೋಡುವಂತಹ ಕೆಲಸಗಳನ್ನ ಮಾಡಿದ್ರು. ಗ್ರಾಮ ವಾಸ್ತವ್ಯ, ಜನತಾ ದರ್ಶನದಂತಹ ಕಾರ್ಯಕ್ರಮ ಯಾವ ಮುಖ್ಯಮಂತ್ರಿಯೂ ಮಾಡಿಲ್ಲ ಎಂದರು.
ನಮ್ಮ ತಾತಾ, ತಂದೆಗೆ ನೀವು ಕೊಟ್ಟ ಪ್ರೀತಿ ನಾನು ಎಂದೂ ಮರೆಯಲ್ಲ. ನೀವೆ ನನ್ನ ಮಾರ್ಗದರ್ಶಕರು, ಯಾವತ್ತೂ ನಿಮ್ಮ ಕೈ ಬಿಡಲ್ಲ. ಒಂಭತ್ತು ತಿಂಗಳಲ್ಲಿ ಎಷ್ಟೆಲ್ಲಾ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಇನ್ನೂ ಐದು ವರ್ಷ ಅಧಿಕಾರದಲ್ಲಿದ್ರೆ ಎಷ್ಟು ಅಭಿವೃದ್ಧಿ ಕೆಲ್ಸ ಮಾಡಬಹುದು ಎಂದ ನಿಖಿಲ್, ನಾನು ಭಾಷಣ ಮಾಡಲು ಬಂದಿಲ್ಲ. ಎಂದೆಂದಿಗೂ ನಿಮ್ಮೊಂದಿಗಿರುತ್ತೇನೆ ಎಂದರು.