ಮಂಡ್ಯ:ಯಾರ ಜೊತೆಯೂ ನನಗೆ ವೈರತ್ವ ಇಲ್ಲ. ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ನಿಮ್ಮ ಮನೆ ಬಾಗಿಲಿಗೆ ಬರುತ್ತೇನೆ ಎಂದು ನೂತನ ಸಂಸದೆ ಸುಮಲತಾ ಮಂಡ್ಯದ ದಳಪತಿಗಳಿಗೆ ಆಹ್ವಾನ ನೀಡಿದರು.
ನಗರದಲ್ಲಿಂದು ನಡೆದ ಸ್ವಾಭಿಮಾನಿ ಸಮಾವೇಶದಲ್ಲಿ ಮಾತನಾಡಿದ ಅವರು, ದ್ವೇಷದ ಚುನಾವಣೆ ಮುಗಿದಿದೆ, ಅದನ್ನು ನಿಲ್ಲಿಸಿ. ನಮ್ಮ ಮುಂದಿರೋದು ರೈತರ ಸಮಸ್ಯೆ, ನೀರಿನ ಸಮಸ್ಯೆ ಅದನ್ನು ಬಗೆಹರಿಸೋಣ. ಎಲ್ಲರೂ ಒಂದಾಗಿ ಕೆಲಸ ಮಾಡೋಣ. ಒಂದು ವೇಳೆ ನೀವು ನನ್ನ ಬಳಿ ಬರದೇ ಇದ್ರೂ, ನಾನೇ ನಿಮ್ಮ ಮನೆ ಬಾಗಿಲಿಗೆ ಬಂದು ಚರ್ಚೆ ಮಾಡ್ತೀನಿ ಎಂದು ಪ್ರತಿಪಕ್ಷಗಳ ನಾಯಕರಿಗೆ ತೆರೆದ ಆಹ್ವಾನ ನೀಡಿದರು.
ದಳಪತಿಗಳಿಗೆ ಸುಮಲತಾ ನೇರ ಆಹ್ವಾನ ಕಳೆದ ಆರು ತಿಂಗಳಲ್ಲಿ ಏನೆಲ್ಲಾ ನಡೆದಿದೆ ಅಂತಾ ನಿಮಗೆ ಗೊತ್ತು. ನಾಮಪತ್ರ ಸಲ್ಲಿಸಿದ ನಂತರ ಇತಿಹಾಸ ಸೃಷ್ಟಿಸಿದ್ದು, ಮಂಡ್ಯ ಜನ. ನಾನು ಯಾರೂ ಅಂತಾ ಎಲ್ಲರಿಗೂ ಗೊತ್ತಾಗುವಂತೆ ಮಾಡಿದ್ದು, ಲೋಕಸಭೆ ಸಂಸದೆಯಾಗಿ ಆಯ್ಕೆ ಮಾಡಿ ಸಾಬೀತು ಮಾಡಿದ್ದೀರಿ. ಇದು ಅಂಬರೀಶ್ ಅಣ್ಣನ ಗೆಲುವು, ನನ್ನ ಪರವಾಗಿ ಕೆಲಸ ಮಾಡಿದ ಪ್ರತಿಯೊಬ್ಬ ಕಾರ್ಯಕರ್ತನ ಗೆಲುವು. ಆರತಿ ಮಾಡಿದ ಮಹಿಳೆಯರ ಮಂಡ್ಯದ ಸ್ವಾಭಿಮಾನದ ಗೆಲುವಿದು. ಇದು ರಾಜ್ಯದ ರೈತಸಂಘ, ಬಿಜೆಪಿ ಪಕ್ಷದ ಗೆಲುವು. ನನ್ನ ಗೆಲುವು ಸರ್ವಪಕ್ಷ ಹಾಗೂ ಮಂಡ್ಯ ಜನತೆಗೆ ಸೇರುತ್ತೆ ಎಂದರು.
ಸ್ವಾಭಿಮಾನ ಮುಖ್ಯ ಅನ್ನೋದು ಇಡೀ ಇಂಡಿಯಾಕ್ಕೆ ತೋರಿಸಿದ್ದೀರಿ. 52 ವರ್ಷಗಳ ನಂತರ ಮಹಿಳಾ ಪಕ್ಷೇತರ ಅಭ್ಯರ್ಥಿ ಗೆದ್ದಿರೋದು ಮಂಡ್ಯದಲ್ಲಿ ಮಾತ್ರ. ಪಕ್ಷೇತರ ಅಭ್ಯರ್ಥಿಯಾಗಿ ಇಡೀ ಇಂಡಿಯಾದಲ್ಲಿ ಗೆದ್ದಿರೋದು ಒಬ್ಬರೇ. ಈ ಇತಿಹಾಸ ಮಂಡ್ಯದ ಜನ್ರಿಗೆ ಸೇರುತ್ತೆ. ಪಕ್ಷೇತರ ಅಭ್ಯರ್ಥಿಗೆ ಕಾಂಗ್ರೆಸ್, ಬಿಜೆಪಿ, ರೈತಸಂಘ ಹಾಗೂ ಜೆಡಿಎಸ್ ಬಾವುಟ ಹಾರಾಟ ಮಾಡಿದ್ದು ನಮ್ಮ ಪರವಾಗಿ ಮಾತ್ರ. ನಮ್ಮ ಪರವಾಗಿ ಪ್ರಚಾರ ಮಾಡಿದವರು ಯಾರೂ ಕೂಡ ಒಂದೇ ಒಂದು ಅಪ ಪ್ರಚಾರದ ಮಾತುಗಳನ್ನಾಡಿಲ್ಲ ಎಂದು ಇದೇ ಸಂದರ್ಭದಲ್ಲಿ ಸುಮಲತಾ ನೆನಪಿಸಿಕೊಂಡರು.
ಜೆಡಿಎಸ್ನವರು ಆಡಿರುವ ಮಾತುಗಳಿಗೆ ಜನರು ಉತ್ತರ ಕೊಟ್ಟಿದ್ದಾರೆ. ಕಾವೇರಿ ನೀರಿನ ಸಮಸ್ಯೆ ಬಂದಾಗ ಕೇಂದ್ರ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ರು. ಅಂಬಿ ಮಾರ್ಗದರ್ಶನದಲ್ಲಿ ನಾನು ನಡೆದುಕೊಂಡು ಹೋಗ್ತಿನಿ. ಪ್ರತಿವರ್ಷ ಮೇ 29 ರಂದು ಮಧ್ಯರಾತ್ರಿಯಿಂದಲೇ ಬಂದು ಅಂಬಿ ಹುಟ್ಟು ಹಬ್ಬ ಆಚರಿಸುತ್ತಿದ್ದೀರಿ. ಆದರೆ, ನಾನು ಸಾಯೋವರೆಗೂ ಇನ್ಮುಂದೆ ಮಂಡ್ಯದಲ್ಲೇ ಅಂಬಿ ಹುಟ್ಟು ಹಬ್ಬ ಆಚರಿಸ್ತೀನಿ ಎಂದರು.
ರೈತ ಸಂಘದ ಬೇಡಿಕೆಗಳಿಗೆ ನಾನು ಕಟಿಬದ್ಧಳಾಗಿದ್ದೇನೆ. ಮಾತುಗಳಿಂದ ಯಾವುದೇ ಕೆಲಸ ನಡೆಯಲ್ಲ. ನಾನು ಚುನಾವಣೆಯಲ್ಲಿ ಪೊಳ್ಳು ಭರವಸೆ ನೀಡಲಿಲ್ಲ. ಆದರೆ, ಈಗ ಅಂಬಿ ಮೇಲೆ ಪ್ರಮಾಣ ಮಾಡ್ತೀನಿ, ಮಂಡ್ಯ ಜನರ ಅಭಿವೃದ್ಧಿಗೆ ಶ್ರಮಿಸ್ತೀನಿ. ನಿಮ್ಮ ಪ್ರತಿನಿಧಿಯಾಗಿ ಡೆಲ್ಲಿಯಲ್ಲಿ ಕೆಲಸ ಮಾಡ್ತೀನಿ ಎಂದು ಅಚಲ ಭರವಸೆ ನೀಡಿದ್ದಾರೆ ಸುಮಲತಾ ಅಂಬರೀಶ್