ಮಂಡ್ಯ:ಇನ್ನೇನು ಮಳೆಗಾಲ ಶುರುವಾಗುತ್ತಿದ್ದು, ಜನರಿಗೆ ಸರ್ಕಾರಿ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಎಷ್ಟೋ ಜನರಿಗೆ ಸರ್ಕಾರದ ಯೋಜನೆಗಳೇ ಗೊತ್ತಿಲ್ಲ. ಹೀಗಾಗಿ ಜನರ ಸಮೀಪಕ್ಕೆ ಆರೋಗ್ಯ ಯೋಜನೆ ತಲುಪಿಸಲು ಆರೋಗ್ಯ ಇಲಾಖೆ ಹೊಸ ಪ್ರಯತ್ನಕ್ಕೆ ಮುಂದಾಗಿದ್ದು, ಸಕ್ಕರೆ ಜಿಲ್ಲೆಯಲ್ಲಿ 8 ಜಿಲ್ಲೆಗಳ 200 ಜನಕ್ಕೆ ತರಬೇತಿ ನೀಡಲಾಗಿದೆ.
ಆರೋಗ್ಯ ಜಾಗೃತಿ ಮೂಡಿಸಲು ಬೀದಿ ನಾಟಕ ತಂಡಗಳಿಗೆ ತರಬೇತಿ ಹಾಗಾದರೆ ಆ ತರಬೇತಿ ಏನು ಅನ್ನೋದು ಇಲ್ಲಿದೆ ನೋಡಿ.
ಜನಸಾಮಾನ್ಯರಲ್ಲಿ ಶೀಘ್ರವಾಗಿ ಆರೋಗ್ಯ ಯೋಜನೆಗಳ ಬಗ್ಗೆ ಅರಿವು ಮೂಡಿಸಬೇಕಾಗಿದ್ದು ಆರೋಗ್ಯ ಇಲಾಖೆಯ ಕರ್ತವ್ಯ. ಹೀಗಾಗಿ ಜನಸಾಮಾನ್ಯರಿಗೆ ಅವರ ಇಷ್ಟವಾದ ಮಾರ್ಗದಲ್ಲೇ ತಿಳಿಸಲು ಹೊಸ ಪ್ರಯೋಗಕ್ಕೆ ಇಲಾಖೆ ಮುಂದಾಗಿದೆ. ಅದೇನಪ್ಪ ಅಂದರೆ ಬೀದಿ ನಾಟಕಗಳ ಮೂಲಕ ಆರೋಗ್ಯ ಇಲಾಖೆಯ ಎಲ್ಲಾ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಮುಂದಾಗಿದೆ. ಹೀಗಾಗಿ ಮಂಡ್ಯ ಸಮೀಪದ ಉರಮಾರ ಕಸಲಗೆರೆ ಸಮೀಪದ ಮೊರಾರ್ಜಿ ಪದವಿ ಪೂರ್ವ ಕಾಲೇಜಿನಲ್ಲಿ 8 ಜಿಲ್ಲೆಯ ಕಲಾವಿದರಿಗೆ ಮೂರು ದಿನಗಳ ಕಾರ್ಯಾಗಾರ ನಡೆಸಿ ತರಬೇತಿ ನೀಡಲಾಯಿತು.
ತರಬೇತಿಯಲ್ಲಿ ಮೈಸೂರು ವಲಯದ ಮೈಸೂರು, ಮಡಿಕೇರಿ, ಮಂಡ್ಯ, ಚಾಮರಾಜನಗರ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಗೂ ಹಾಸನದ ಕಲಾ ತಂಡಗಳಿಗೆ ತರಬೇತಿ ನೀಡಲಾಯಿತು. ಆರೋಗ್ಯ ಯೋಜನೆಗಳ ಸಂಪೂರ್ಣ ಮಾಹಿತಿಯ ಅರ್ಧ ಗಂಟೆಯ ಬೀದಿ ನಾಟಕ ಹೇಗೆ ಮೂಡಿಬರಬೇಕು, ಜನರಿಗೆ ಹೇಗೆ ತಲುಪಿಸಬೇಕು ಎಂಬುದರ ಮಾಹಿತಿಯನ್ನು ಕಲಾವಿದರಿಗೆ ನೀಡಲಾಗಿದೆ. ಜೊತೆಗೆ ಮೂರು ದಿನಗಳ ಕಾಲ ಪೂರ್ವ ತಯಾರಿ ಮಾಡಲಾಗಿದೆ.
ರಂಗಾಯಣದ ಕಲಾವಿದರು ಸುಮಾರು 200 ಕಲಾವಿದರಿಗೆ ಮೂರು ದಿನಗಳ ಕಾಲ ತರಬೇತಿ ನೀಡಿದ್ದಾರೆ. ಕಲಾವಿದರ ಜೊತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಖುದ್ದು ಯೋಜನೆಗಳ ಬಗ್ಗೆ ಮಾಹಿತಿ ಒದಗಿಸಿ ಮೇಲ್ವಿಚಾರಣೆ ಮಾಡಿದ್ದಾರೆ. ತರಬೇತಿ ಪಡೆದಿರುವ ತಂಡಗಳು ಮುಂದಿನ ತಿಂಗಳು ಆಯ್ದ ಗ್ರಾಮಗಳಲ್ಲಿ ಪ್ರದರ್ಶನ ನೀಡಲಿವೆ. ಆ ಮೂಲಕ ಆರೋಗ್ಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಲಿದ್ದಾರೆ.