ಮಂಡ್ಯ: ಪ್ಲಾಸ್ಟಿಕ್ ಬುಟ್ಟಿಯಲ್ಲಿ ನವಜಾತ ಗಂಡು ಶಿಶು ಪತ್ತೆಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ತರಕಾರಿ ತರುವ ಪ್ಲಾಸ್ಟಿಕ್ ಬುಟ್ಟಿಯಲ್ಲಿ ಮಗುವನ್ನು ಮುಚ್ಚಿಟ್ಟು ಪಾಂಡವಪುರ ತಾಲೂಕಿನ ಚಿಕ್ಕಮರಳಿ ಗೇಟ್ ಬಳಿ ಬಿಟ್ಟು ಹೋಗಲಾಗಿದೆ. ಮಗು ಅಳುತ್ತಿದ್ದ ಶಬ್ದ ಕೇಳಿ ದಾರಿಹೋಕರು ಹೋಗಿ ನೋಡಿದಾಗ ಪ್ಲಾಸ್ಟಿಕ್ ಬುಟ್ಟಿಯಲ್ಲಿ ಮಗು ಪತ್ತೆಯಾಗಿದೆ. ಕೂಡಲೇ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳೀಯರ ಮಾಹಿತಿ ಮೆರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ಮಗುವನ್ನು ರಕ್ಷಣೆ ಮಾಡಿ ಪಾಂಡವಪೂರ ಆಸ್ಪತ್ರಗೆ ಕರೆದೊಯ್ದಿದ್ದಾರೆ.
ಮದ್ದೂರಲ್ಲಿ ತಲೆ ಮೇಲೆ ಕಬ್ಬಿಣದ ರಾಡ್ ಬಿದ್ದು ರೈತ ಸಾವು:ವಿದ್ಯುತ್ ಪರಿವರ್ತಕ ಅಳವಡಿಸುತ್ತಿದ ವೇಳೆ ಚೈನ್ ಪೋಲ್ ಕಬ್ಬಿಣದ ರಾಡು ತಲೆ ಮೇಲೆ ಬಿದ್ದು ರೈತನೋರ್ವ ಸ್ಥಳದಲ್ಲೇ ಸಾವನ್ನಪಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಚನ್ನಮ್ಮನ ಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಚನ್ನಮ್ಮನ ಕೊಪ್ಪಲು ಗ್ರಾಮದ ರೈತ ಕರಿಗೌಡ (60) ಮೃತ ದುರ್ದೈವಿ. ಜಮೀನಿನ ಬಳಿ ಹೊಸ ವಿದ್ಯುತ್ ಪರಿವರ್ತಕ ಅಳವಡಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಚೆಸ್ಕಾಂ ಸಿಬ್ಬಂದಿ ವಿದ್ಯುತ್ ಪರಿವರ್ತಕ ಅಳವಡಿಸಿಕೊಡುತ್ತೇವೆ ಎಂದು ಶುಕ್ರವಾರ ಸಂಜೆ 7 ಗಂಟೆಯ ಸುಮಾರಿಗೆ ರೈತ ಕರಿಗೌಡ ಅವರನ್ನು ಗದ್ದೆಯ ಬಳಿ ಕರೆದೊಯ್ದಿದ್ದಾರೆ.
ಕತ್ತಲೆಯಲ್ಲಿ ಟಿ.ಸಿ.ಅಳವಡಿಸುವಾಗ ಮೇಲಿಂದ ಚೈನ್ ಪೋಲ್ ಕಬ್ಬಿಣದ ರಾಡು ರೈತ ಕರಿಗೌಡ ಅವರ ತಲೆಯ ಮೇಲೆ ಬಿದ್ದ ಪರಿಣಾಮ ತೀವ್ರ ರಕ್ತಸ್ತ್ರಾವವಾಗಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಕರಿಗೌಡರು ಮೃತರಿಂದ ಆಕ್ರೋಶಗೊಂಡಿರುವ ಕುಟುಂಬಸ್ಥರು, ಇದು ಚೆಸ್ಕಾಂ ಇಲಾಖೆಯ ಅಧಿಕಾರಿಗಳ ಲೋಪವಾಗಿದ್ದು, ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಅಮಾನತ್ತು ಮಾಡಬೇಕು. ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ ಮತ್ತು ಕುಟುಂಬದ ಒಬ್ಬರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿ ಪತ್ನಿ ಶಿವನಂಜಮ್ಮ ಅವರು ಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.