ಮಂಡ್ಯ : ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಈ ವೇಳೆಗಾಗಲೇ ಪೂರ್ಣಗೊಳ್ಳಬೇಕಿತ್ತು. ಆದರೆ ನಾನಾ ಕಾರಣಗಳಿಂದ ಇನ್ನೂ ಕಾಮಗಾರಿ ನಡೆಯುತ್ತಿದೆ. ಇಂದು ಜಿಲ್ಲೆಯ ಮದ್ದೂರಿನಿಂದ ಶ್ರೀರಂಗಪಟ್ಟಣದವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಸಂಸದೆ ಸುಮಲತಾ ಹಾಗೂ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ವೀಕ್ಷಿಸಿದರು.
ಶ್ರೀರಂಗಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದೆ ಸುಮಲತಾ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಹಲವು ರೀತಿಯ ಲೋಪಗಳು ಕಂಡು ಬಂದಿದೆ. ಇದು ಒಂದು ಅವೈಜ್ಞಾನಿಕ ಕಾಮಗಾರಿ ಎಂದು ಟೀಕಿಸಿದರು. ಬೆಂ-ಮೈ ಹೆದ್ದಾರಿ ಕಾಮಗಾರಿಯ ವಿಚಾರದಲ್ಲಿ ಎರಡು ವರ್ಷದಿಂದ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದೇನೆ.
ಆಗಿನಿಂದಲೂ ಈ ಕಾಮಗಾರಿ ವಿಚಾರದಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೂ ತಂದಿದ್ದೇನೆ. ಆದರೆ ಈ ಬಗ್ಗೆ ಯಾರಿಂದಲೂ ಸೂಕ್ತ ಸ್ಪಂದನೆ ದೊರೆತಿರಲಿಲ್ಲ. ಎರಡು ತಿಂಗಳ ಹಿಂದೆ ನಡೆದ ಕೆಡಿಪಿ ಸಭೆಯಲ್ಲಿ ಈ ಬಗ್ಗೆ ಧ್ವನಿ ಎತ್ತಿದ್ದೆ. ಇಂದು ಗೋಪಾಲಯ್ಯ ಅವರೊಂದಿಗೆ ಹೆದ್ದಾರಿ ಕಾಮಗಾರಿ ಪರಿಶೀಲನೆ ಮಾಡಿದ್ದೇನೆ ಎಂದು ಹೇಳಿದರು.
ಅವೈಜ್ಞಾನಿಕ ಹೆದ್ದಾರಿ ಕಾಮಗಾರಿ : ಹೆದ್ದಾರಿ ಕಾಮಗಾರಿಯಲ್ಲಿ ಸಾಕಷ್ಟು ಸಮಸ್ಯೆಗಳು ಇರುವುದು ಬೆಳಕಿಗೆ ಬಂದಿದೆ. ಬೆಂ-ಮೈ ಓಡಾಡುವವರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಆದರೆ ಮಂಡ್ಯ-ರಾಮನಗರ ಭಾಗದ ಜಿಲ್ಲೆ ಜನರಿಗೆ ಸಾಕಷ್ಟು ಸಮಸ್ಯೆಗಳಿವೆ. ಹಳ್ಳಿ ಜನರು ಓಡಾಡಲು ಸರಿಯಾದ ವ್ಯವಸ್ಥೆಯನ್ನು ಮಾಡಿಲ್ಲ.ಇದು ಒಂದು ಅವೈಜ್ಞಾನಿಕ ಕಾಮಗಾರಿ ಎಂದು ದೂರಿದರು.
ಇದನ್ನೂ ಓದಿ :53 ಹೊಸ ಯೋಜನೆಗಳಿಗೆ ಅನುಮೋದನೆ.. 8619 ಉದ್ಯೋಗ ಸೃಷ್ಟಿ ನಿರೀಕ್ಷೆ: ಸಚಿವ ನಿರಾಣಿ