ಮಂಡ್ಯ: ಜೆಡಿಎಸ್ ಶಾಸಕ ನಾರಾಯಣಗೌಡರ ರಾಜೀನಾಮೆಯಿಂದ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರು ಸಭೆ ಮೇಲೆ ಸಭೆ ನಡೆಸುತ್ತಿದ್ದು, ಮುಂದಿನ ಅಭ್ಯರ್ಥಿ ಯಾರಾಗಬೇಕು, ಜೆಡಿಎಸ್ ತೊರೆದ ಶಾಸಕರಿಗೆ ಯಾವ ರೀತಿ ಚುನಾವಣೆಯಲ್ಲಿ ಬುದ್ಧಿ ಕಲಿಸಬೇಕು ಎಂಬ ವಿಚಾರವಾಗಿ ಚರ್ಚೆಗಳು ನಡೆಯುತ್ತಿವೆ.
ನಾರಾಯಣಗೌಡ ರಾಜೀನಾಮೆ ಹಿನ್ನೆಲೆ ಮಂಡ್ಯದಲ್ಲಿ ಸಭೆ ಮೇಲೆ ಸಭೆ
ನಾರಾಯಣಗೌಡ ರಾಜೀನಾಮೆಯಿಂದ ತೆರವಾದ ಕೆ.ಆರ್ ಪೇಟೆ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಜೆಡಿಎಸ್ ಕಾರ್ಯಕರ್ತರು ಸರಣಿ ಸಭೆ ನಡೆಸುತ್ತಿದ್ದಾರೆ.
ಇಂದು ಕೆ.ಆರ್. ಪೇಟೆಯಲ್ಲಿ ಸಭೆ ಮಾಡಿದ ಕಾರ್ಯಕರ್ತರು ಹಾಗೂ ಮುಖಂಡರು, ನಾರಾಯಣಗೌಡ ವಿರುದ್ಧ ಆಕ್ರೋಶ ಹೊರಹಾಕಿ, ಹಣದಾಸೆಗಾಗಿ ರಾಜೀನಾಮೆ ನೀಡಿ ಬಿಜೆಪಿ ಪಕ್ಷಕ್ಕೆ ಹೋಗುತ್ತಿದ್ದಾರೆ. ಪಕ್ಷವನ್ನು ಬಿಟ್ಟು ಹೋಗುತ್ತಿರುವುದರಿಂದ ಪಕ್ಷಕ್ಕೆ ಹಿಡುದಿರುವ ಗ್ರಹಣ ಬಿಟ್ಟಂತಾಗಿದೆ ಎಂದು ಕುಟುಕಿದರು. ಪಕ್ಷ ಬಿಟ್ಟು ಹೋಗುವವರು ಗೌರವಯುತವಾಗಿ ಹೋಗಲಿ, ಅದನ್ನು ಬಿಟ್ಟು ದೇವೇಗೌಡರ ಕುಟುಂಬವರ್ಗ ಹಾಗೂ ಹೆಣ್ಣುಮಕ್ಕಳ ಬಗ್ಗೆ ಮಾತನಾಡಿದರೆ ತಕ್ಕ ಶಾಸ್ತಿ ಮಾಡಬೇಕಾಗುತ್ತದೆ ಎಂದು ಕಾರ್ಯಕರ್ತರು ಎಚ್ಚರಿಸಿದರು.
ಆಪರೇಷನ್ ಕಮಲಕ್ಕೆ ತುತ್ತಾಗಿ ಇಂದು ದೇವೇಗೌಡರ ಹೆಣ್ಣುಮಕ್ಕಳ ಬಗ್ಗೆ ಆರೋಪ ಹೊರಿಸುತ್ತಿರುವುದು ಒಳ್ಳೆಯ ಲಕ್ಷಣವಲ್ಲ ಎಂದು ಹೇಳಿದ್ರು. ಸಭೆಯಲ್ಲಿ ಆಲಂಬಾಡಿಕಾವಲು ಗ್ರಾಪಂ ಮಾಜಿ ಅಧ್ಯಕ್ಷ ಸಿದ್ಧೇಗೌಡ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ರಾಜು ಸೇರಿ ಇನ್ನಿತರರು ಉಪಸ್ಥಿತರಿದ್ರು.