ಮಂಡ್ಯ :ಬೇರೆ ರಾಜ್ಯ ಅಥವಾ ಜಿಲ್ಲೆಯಿಂದಸರಿಯಾದ ಅನುಮತಿ ಪತ್ರವಿಲ್ಲದೇ ಜಿಲ್ಲೆಗೆ ಪ್ರವೇಶ ಪಡೆಯುತ್ತಿದ್ದವರ ವಾಹನಗಳನ್ನು ತಡೆದು ವಾಪಸ್ ಕಳುಹಿಸುವ ಮೂಲಕ ಜಿಲ್ಲೆಯ ರಕ್ಷಣೆಗೆ ನಿಂತಿದ್ದಾರೆ ನಾಗಮಂಗಲ ಶಾಸಕ ಸುರೇಶ್ ಗೌಡ.
ಮುಂಜಾನೆಯೇ ಅಧಿಕಾರಿಗಳ ಜೊತೆ ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕದಬಹಳ್ಳಿ ಚೆಕ್ ಪೋಸ್ಟ್ನಲ್ಲಿ ತಪಾಸಣೆಗೆ ಇಳಿದಿದ್ದ ಸುರೇಶ್ ಗೌಡ. ಅಂತರ ರಾಜ್ಯ ಹಾಗೂ ಬೇರೆ ಬೇರೆ ಜಿಲ್ಲೆಯಿಂದ ಬರುತ್ತಿದ್ದ ವಾಹನಗಳನ್ನು ತಡೆದು ಪಾಸ್ಗಳ ಪರಿಶೀಲನೆ ನಡೆಸಿದರು.
ಪಾಂಡವಪುರ ಉಪವಿಭಾಗಾಧಿಕಾರಿ ಶೈಲಜಾ, ತಹಶೀಲ್ದಾರ್ ಮೊಹಮದ್, ಸಿಪಿಐ ರಾಜೇಂದ್ರ, ಅನಿತಾ ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆಗೂಡಿ ಕಾರ್ಯಾಚರಣೆ ನಡೆಸಿದ ಅವರು, ಸುಮಾರು ಎರಡು ಗಂಟೆಗಳ ಕಾಲ ತಪಾಸಣೆ ನಡೆಸಿ ಅನುಮತಿ ಪತ್ರವಿಲ್ಲದೇ ವಾಹನಗಳನ್ನು ವಾಪಸ್ ಕಳುಹಿಸುವ ಕೆಲಸ ಮಾಡಿದರು.
ಪ್ರಮುಖವಾಗಿ ಮುಂಬೈನಿಂದ ಜಿಲ್ಲೆಗೆ ಹಲವು ಮಂದಿ ಆಗಮಿಸುತ್ತಿದ್ದಾರೆ. ಹೀಗಾಗಿ ಮುಂಬೈ ಕನ್ನಡಿಗರು ಸರಿಯಾದ ತಪಾಸಣೆ ನಡೆಸಿಕೊಂಡು ಜಿಲ್ಲೆಗೆ ಆಗಮಿಸುತ್ತಿದ್ದಾರಾ, ಆರೋಗ್ಯ ಪರಿಸ್ಥಿತಿ ಹೇಗಿದೆ, ಅನುಮತಿ ಇಲ್ಲದೇ ಜಿಲ್ಲೆಗೆ ಪ್ರವೇಶ ಮಾಡುತ್ತಿದ್ದಾರಾ ಎಂಬುದರ ಬಗ್ಗೆ ಖುದ್ದು ಪರಿಶೀಲನೆ ನಡೆಸಿದರು.