ಮಂಡ್ಯ:ಜಿಲ್ಲೆಯ ಆರ್ಥಿಕ ಜೀವನಾಡಿ ಮೈಷುಗರ್ ಕಾರ್ಖಾನೆ ಸ್ಥಗಿತಗೊಳ್ಳುವುದಕ್ಕೆ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಆರೋಪಿಸಿದರು.
ಮೈಷುಗರ್ ಸಕ್ಕರೆ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲೇ ನಡೆಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳು ನಗರದ ಸರ್ ಎಂ.ವಿ. ಪ್ರತಿಮೆ ಎದುರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಅವರು ಮಾತನಾಡಿದ್ರು.
ಎರಡು ವರ್ಷಗಳಿಂದ ಮೈಷುಗರ್ ಸ್ಥಗಿತಗೊಂಡಿದ್ದರೂ ಜಿಲ್ಲೆಯಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳು ದಿವ್ಯಮೌನ ವಹಿಸಿದ್ದಾರೆ. ಜಿಲ್ಲೆಯಿಂದ 10 ಮಂದಿ ಶಾಸಕರು ಆಯ್ಕೆಯಾಗಿದ್ದಾರೆ. ಸರ್ಕಾರಿ ಸ್ವಾಮ್ಯದಲ್ಲಿರುವ ಸಕ್ಕರೆ ಕಾರ್ಖಾನೆ ಆರಂಭಿಸುವಂತೆ ಯಾರೊಬ್ಬರೂ ಸರ್ಕಾರದ ಮೇಲೆ ಒತ್ತಡ ತರಲಿಲ್ಲ. ಇದು ಜಿಲ್ಲೆಯ ಜನರಿಗೆ ಮಾಡಿದ ದ್ರೋಹ ಎಂದು ಟೀಕಿಸಿದರು.
2023ರಲ್ಲಿ ಜನರ ಮತ್ತು ದೇವರ ಆಶೀರ್ವಾದದಿಂದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಒಂದೇ ತಿಂಗಳಲ್ಲಿ ಮೈಷುಗರ್ ಪ್ರಾರಂಭಿಸುವುದಾಗಿ ಅವರು ಭರವಸೆ ನೀಡಿದರು.
'ತವರಿನ ಮಗ ಬಿಎಸ್‌ವೈ ಜಿಲ್ಲೆ ಕಡೆಗಣಿಸಿದರು'
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಮೈಷುಗರ್ ಚಾಲನೆಯಲ್ಲಿತ್ತು. ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾರ್ಖಾನೆ ಸ್ಥಗಿತಗೊಂಡಿದೆ. ಬಳಿಕ ಹೆಚ್.ಡಿ.ಕುಮಾರಸ್ವಾಮಿ ಅಧಿಕಾರಕ್ಕೇರಿದರೂ ಕಾರ್ಖಾನೆಗೆ ಜೀವ ಬರಲಿಲ್ಲ. ನಂತರ ಬಿ.ಎಸ್.ಯಡಿಯೂರಪ್ಪ ಸಿಎಂ ಹುದ್ದೆಗೇರಿದರು. ತವರಿನ ಮಗ ಜಿಲ್ಲೆಯನ್ನು ಕಡೆಗಣಿಸೋಲ್ಲ, ಸಂಪೂರ್ಣವಾಗಿ ಅಭಿವೃದ್ಧಿ ಕಡೆ ಕೊಂಡೊಯ್ಯುತ್ತೇನೆ ಎಂದು ಭರವಸೆ ಕೊಟ್ಟಿದ್ದರು. ಆದರೆ ಅವರಿಂದಲೂ ಕಾರ್ಖಾನೆಗೆ ಪುನಶ್ಚೇತನ ನೀಡಲಾಗಲಿಲ್ಲ. ಈಗ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾರೆ. ಕಾರ್ಖಾನೆ ಆರಂಭದ ಬಗ್ಗೆ ಇನ್ನೂ ಏನೂ ಆಗಿಲ್ಲ. ಜಿಲ್ಲೆಯಲ್ಲಿ ಸ್ವಲ್ಪ ಒಗ್ಗಟ್ಟಿನ ಕೊರತೆ ಇದೆ. ರೈತರ ಹೋರಾಟಕ್ಕೆ ಬೆಂಬಲ ಕೊಡುವುದು ಎಲ್ಲಿವರೆಗೆ ಪ್ರಾರಂಭವಾಗುವುದಿಲ್ಲವೋ ಅಲ್ಲಿವರೆಗೆ ಜಿಲ್ಲೆ ಉದ್ದಾರ ಆಗಲು ಸಾಧ್ಯವಿಲ್ಲ ಎಂದು ತಿಳಿಸಿದರು.
'ಮಂಡ್ಯ ಜಿಲ್ಲೆ ಕೂಗಿಗೆ ವಿಧಾನಸೌಧ ನಡುಗುತ್ತಿತ್ತು'
ಒಂದು ಕಾಲದಲ್ಲಿ ಮಂಡ್ಯ ಜಿಲ್ಲೆ ಕೂಗಿಗೆ ವಿಧಾನಸೌಧ ನಡುಗುತ್ತಿತ್ತು. ಇದೀಗ ಆ ಸದ್ದು ಇಲ್ಲದ ಕಾರಣ ಸರ್ಕಾರ ಜಿಲ್ಲೆಯನ್ನೂ ಕಡೆಗಣಿಸುತ್ತಿದೆ. ಸರ್ಕಾರಕ್ಕೆ ನಮ್ಮ ಕೂಗು ಕೇಳಿಸುತ್ತಿಲ್ಲ. ಜಿಲ್ಲೆಯಲ್ಲಿ ಅಭಿವೃದ್ಧಿ ವಿಚಾರ ಗಮನಿಸಿದರೆ ಏನೇನೂ ಇಲ್ಲ ಎಂದರು.
ಬಿಜೆಪಿಯವರಿಂದ ಕಾರ್ಖಾನೆ ಶುರು ಮಾಡಲು ಸಾಧ್ಯವಾಗದಿದ್ದರೆ ಇನ್ನು ಒಂದು ವರ್ಷ ಅಷ್ಟೇ. 2023ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಕಾರ್ಖಾನೆ ಪ್ರಾರಂಭವಾಗುತ್ತದೆ. ಈಗ ಸರ್ಕಾರದ ಒಡೆತನದಲ್ಲಿ ಮೈಷುಗರ್ ಪ್ರಾರಂಭ ಮಾಡುವವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಿಮಗೆ ಜಿಲ್ಲೆಯ ಬಗ್ಗೆ ಗೌರವ ಇದ್ದರೆ ತಕ್ಷಣವೇ ಸರ್ಕಾರಿ ಸ್ವಾಮ್ಯದಲ್ಲೇ ಮೈಷುಗರ್ ಪ್ರಾರಂಭ ಮಾಡಿ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಪೊಲೀಸ್, ಅರಣ್ಯ ಇಲಾಖೆ ಅವ್ಯವಸ್ಥೆಯ ಆಗರ : ಶಾಸಕ ಎಂ ಶ್ರೀನಿವಾಸ್ ಆರೋಪ