ಮಂಡ್ಯ:ರೈತರ ಜೀವನಾಡಿ ಮೈಶುಗರ್ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಸ್ಥಗಿತಗೊಂಡಿದೆ. ಅವಧಿಗೂ ಮುನ್ನ ಕಬ್ಬು ಅರೆಯುವಿಕೆ ಸ್ಥಗಿತಗೊಳಿಸಿದ್ದು, ಕಾರ್ಖಾನೆಗೆ ಅಗತ್ಯ ಕಬ್ಬು ಪೂರೈಕೆಯಲ್ಲಿ ಕೊರತೆ ಎದುರಾಗಿದೆ. 2022 ರ ಸೆ.1 ರಂದು ತುರಾತುರಿಯಲ್ಲಿ ಕಾರ್ಖಾನೆ ಆರಂಭ ಗೊಂಡಿತ್ತು. ಪ್ರಾರಂಭವಾದ 5 ತಿಂಗಳಲ್ಲಿ 1 ಲಕ್ಷದ 300 ಟನ್ ಕಬ್ಬು ನುರಿಸಲಾಗಿದೆ. ತಾಂತ್ರಿಕ ದೋಷವಿದ್ದರೂ ಐದು ತಿಂಗಳು ಕಬ್ಬು ನುರಿಸಿ ಕಾರ್ಯ ನೆರವೇರಿಸಿದೆ.
ಕಾರ್ಖಾನೆ ನಷ್ಟದ ಬಗ್ಗೆ ಸರ್ಕಾರಕ್ಕೆ ಪತ್ರ: ಕಾರ್ಖಾನೆ ಸಂಪೂರ್ಣ ದುರಸ್ತಿ ಕಾರ್ಯಕ್ಕೆ ಅನುದಾನ ಬಿಡುಗಡೆಗೆ ಮೈಶುಗರ್ ಆಡಳಿತ ಮಂಡಳಿ ಸರ್ಕಾರಕ್ಕೆ ಪತ್ರ ಬರೆದಿದೆ. ಕಾರ್ಖಾನೆ ನಿನ್ನೆ ರಾತ್ರಿಯಿಂದ ಕಬ್ಬು ನುರಿಸುವಿಕೆ ಸ್ಥಗಿತಗೊಳಿಸಿರುವುದನ್ನು ಎಂ ಡಿ ಅಪ್ಪಾಸಾಹೇಬ್ ಪಾಟೀಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಬ್ಬು ಪೂರೈಕೆಯಲ್ಲಿ ವ್ಯತ್ಯಯ:ಮುಂದಿನ ವರ್ಷದ ಸಿದ್ದತೆಗಾಗಿ ಮೈ ಶುಗರ್ ಕಬ್ಬು ಅರೆಯುವಿಕೆ ಕಾರ್ಯ ಸ್ಥಗಿತಗೊಳಿಸಲಾಗಿದೆ. ಕಾರ್ಖಾನೆ ಪ್ರತಿನಿತ್ಯ ಕನಿಷ್ಠ 2 ಸಾವಿರ ಟನ್ ಕಬ್ಬು ಅರೆಯುವ ಗುರಿ ಇಟ್ಟುಕೊಂಡಿತ್ತು. ಆದರೆ, ಬೇಡಿಕೆಗೆ ತಕ್ಕ ಹಾಗೆ ಕಾರ್ಖಾನೆಗೆ ಕಬ್ಬು ಸರಬರಾಜು ಆಗಲಿಲ್ಲ. ಕಬ್ಬು ಪೂರೈಕೆಯಲ್ಲಿ ವ್ಯತ್ಯಯ ಆಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೂರು ತಿಂಗಳಲ್ಲಿ ಕಾರ್ಖಾನೆ ದುರಸ್ತಿ: ಸರ್ಕಾರ ತುರಾತುರಿಯಲ್ಲಿ ಕಾರ್ಖಾನೆ ಪ್ರಾರಂಭ ಮಾಡಿತ್ತು. ಕಬ್ಬು ಸಮರ್ಪಕವಾಗಿ ಸಿಗಲಿಲ್ಲ. ಬೇರೆ ಕಾರ್ಖಾನೆಗೆ ಕಬ್ಬು ಸರಬರಾಜು ಆಗಿದೆ. ಹಾಗಾಗಿ ಕಾರ್ಖಾನೆ ನಷ್ಟದಲ್ಲಿ ನಡೆದಿದೆ. ಇನ್ನೂ ಮೂರು ತಿಂಗಳಲ್ಲಿ ಕಾರ್ಖಾನೆ ದುರಸ್ತಿ ಕಾರ್ಯ ಸರಿಪಡಿಸಿ ಕಾರ್ಖಾನೆ ಸುಗಮವಾಗಿ ನಡೆಯಲು ಕ್ರಮ ವಹಿಸಬೇಕು. ಕಾರ್ಖಾನೆಗೆ ಉಳಿದ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಪಡಿಸುವ ಕೆಲಸವನ್ನ ಸರ್ಕಾರ ಮಾಡಬೇಕು. ಮೈಶುಗರ್ಗಾಗಿ ರೈತರು ಹಲವು ಹೋರಾಟ ನಡೆಸಿದರು. ಅದನ್ನು ಉಳಿಸಿ-ಬೆಳೆಸಿಕೊಂಡು ಹೋಗುವ ಕೆಲಸವನ್ನು ಸರ್ಕಾರ ಮಾಡಬೇಕು .ರೈತರಿಗೆ ಅನುಕೂಲವಾಗುವಂತೆ ಕಾರ್ಖಾನೆ ನಡೆಸಬೇಕು ಎಂದು ರೈತರ ಒತ್ತಾಯಿಸಿದ್ದಾರೆ.