ಮಂಡ್ಯ:ಮಂಡ್ಯದ ಮೈಶುಗರ್ ಕಾರ್ಖಾನೆ. ಇದು ಸರ್ಕಾರಿ ಸ್ವಾಮ್ಯದ ರಾಜ್ಯದ ಏಕೈಕ ಸಕ್ಕರೆ ಕಾರ್ಖಾನೆ. ಇಲ್ಲಿ ಪ್ರಸಕ್ತ ಸಾಲಿನ ಹಂಗಾಮಿನ ಕಬ್ಬು ನುರಿಸುವ ಕಾರ್ಯಕ್ಕೆ ಗುರುವಾರ ಚಾಲನೆ ನೀಡಲಾಯಿತು. ಕಾರ್ಖಾನೆ ಪುನರಾರಂಭದ ಭರವಸೆಯನ್ನು ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ಕೊಟ್ಟಿತ್ತು. ಅದರಂತೆಯೇ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಸಿಎಂ ಸಿದ್ದರಾಮಯ್ಯ 50 ಕೋಟಿ ರೂ ಅನುದಾನ ಬಿಡುಗಡೆ ಮಾಡಿದ್ದರು. ಅನುದಾನ ಬಿಡುಗಡೆಯಾದ ವಾರದಲ್ಲಿಯೇ ಕಾರ್ಖಾನೆ ಬಾಯ್ಲರ್ಗೆ ಅಗ್ನಿಸ್ಪರ್ಶವನ್ನೂ ಮಾಡಲಾಗಿತ್ತು. ಇದೀಗ ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ ನೀಡುವ ಮೂಲಕ ಕಾರ್ಖಾನೆ ಅಧಿಕೃತವಾಗಿ ಪುನರಾರಂಭವಾಗಿದೆ.
ಕಾರ್ಖಾನೆ ಆವರಣದಲ್ಲಿ ಮೊದಲು ದೇವರಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಸಕ್ಕರೆ ಸಚಿವ ಶಿವಾನಂದ ಎಸ್. ಪಾಟೀಲ್ ಹಾಗೂ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.
ಸಚಿವ ಶಿವಾನಂದ ಪಾಟೀಲ್ ಮಾತನಾಡಿ, "ಪ್ರಸಕ್ತ ಸಾಲಿನ ಹಂಗಾಮಿನಲ್ಲಿ ಪ್ರತಿದಿನ 3 ಸಾವಿರ ಟನ್ ಕಬ್ಬು ನುರಿಸುವ ಗುರಿ ಇದೆ. ಕಾರ್ಖಾನೆಯಲ್ಲಿ ಕಬ್ಬು ನುರಿಯುವ ಕಾರ್ಯಕ್ಕೆ ಕೆಲವು ದಿನ ಟರ್ಬೈನ್ ಸಮಸ್ಯೆಯಿಂದ ತಡವಾಯಿತು. ಗುರುವಾರ ಮತ್ತು ಶುಕ್ರವಾರ 1,500 ರಿಂದ 2,000 ಟನ್ ಕಬ್ಬು ನುರಿಸಲಾಗುವುದು. ಕಾಲಕ್ರಮೇಣ 3 ಸಾವಿರ ಟನ್ನಿಂದ 5 ಸಾವಿರ ಟನ್ವರೆಗೂ ನುರಿಯುವ ಕೆಲಸ ನಡೆಯಲಿದೆ. ರೈತರಿಗೆ ಎಫ್‌ಆರ್‌ಪಿ ಪ್ರಕಾರ ದರ ನೀಡಿ ಕಬ್ಬು ಖರೀದಿಸಲಾಗುವುದು. ಕಳೆದ ಬಾರಿ ಕಡಿಮೆ ರಿಕವರಿ ಇದ್ದರೂ ರೈತರಿಗೆ 2,800 ರೂ ನೀಡಲಾಗಿದೆ" ಎಂದರು.