ಮಂಡ್ಯ:ತಮ್ಮ ಮಗಳೊಂದಿಗೆ ಪ್ರೀತಿ-ಪ್ರೇಮ ಅಂತಾ ತಿರುಗಾಡಿದ್ದ ಬಾಲಕನಿಗೆ ಹುಡುಗಿಯ ಕುಟುಂಬಸ್ಥರು ಮಸಣದ ಹಾದಿ ತೋರಿಸಿದ್ದಾರೆ. ಜಿಲ್ಲೆಯ ಕಲ್ಲಹಳ್ಳಿಯಲ್ಲಿ ಪ್ರಕರಣ ನಡೆದಿದ್ದು, ಈ ಸಂಬಂಧ 17 ಜನ ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಹೌದು, ಅಪ್ರಾಪ್ತ ವಯಸ್ಸಿನಲ್ಲೇ ಅವರಿಬ್ಬರಲ್ಲಿ ಪ್ರೀತಿ ಚಿಗುರೊಡೆದಿತ್ತು. ಇದು ಹುಡುಗಿಯ ಪೋಷಕರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಪ್ರೀತಿ ಮುಂದುವರಿದು, ಮುಂದೆ ಹೆಮ್ಮರವಾಗಿ ಬೆಳೆದೀತು ಎಂದು ಬಾಲಕನನ್ನು ಮನೆಗೆ ಎಳೆದೊಯ್ದು ಹಿಗ್ಗಾಮುಗ್ಗಾ ಥಳಿಸಿದ್ದರು ಬಾಲಕಿಯ ಪೋಷಕರು. ಹೀಗೆ ಹೊಡೆತ ತಿಂದ ಆತ ಚಿಕಿತ್ಸೆ ಫಲಿಸದೇ ಪ್ರಾಣ ಬಿಟ್ಟಿದ್ದಾನೆ. ಈ ಸಂಬಂಧ ಆರೋಪಿಗಳಾದ ನಗರಸಭೆ ಸದಸ್ಯ ಶಿವಲಿಂಗು ಹಾಗೂ ಪಿಎಸ್ಐ ಶಿವಮಂಜು ಅವರ ಇಬ್ಬರು ಪುತ್ರರು ಸೇರಿ ಒಟ್ಟು 17 ಮಂದಿಯನ್ನು ಮಂಡ್ಯದ ಪಶ್ಚಿಮ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಡೆದಿದ್ದಿಷ್ಟು..
ಕಲ್ಲಹಳ್ಳಿಯ 17 ವರ್ಷದ ಬಾಲಕ ಅದೇ ಬಡಾವಣೆಯ ಬಾಲಕಿಯನ್ನು ಪ್ರೀತಿಸುತ್ತಿದ್ದ. ಈ ಕಾರಣಕ್ಕೆ ಬಾಲಕಿಯ ಮನೆಯವರು ಆತನನ್ನು ಮನೆಗೆ ಎಳೆದೊಯ್ದು ಹಲ್ಲೆ ಮಾಡಿದ್ದಾರೆ ಎನ್ನಲಾಗಿತ್ತು. ಬಾಲಕಿಯ ತಂದೆ ಕಲ್ಲಹಳ್ಳಿ ಶಿವಲಿಂಗು ಎಂಬುವರು ಹಲ್ಲೆ ಮಾಡಿದ್ದು, ಇವರು ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿದ್ದಾರೆ.