ಮಂಡ್ಯ: ಜಿಲ್ಲೆಯ ಮೂವರು ಅರ್ಚಕರ ಹತ್ಯೆ ನಡೆದ ದೇವಾಲಯಕ್ಕಿಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಮುಜಾರಾಯಿ ಕಮೀಷನರ್ ರೋಹಿಣಿ ಸಿಂಧೂರಿ, ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಭೇಟಿ ನೀಡಿ ಮೃತರ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಣೆ ಮಾಡಿದರು. ತಲಾ 5 ಲಕ್ಷ ರೂಪಾಯಿಗಳ ಚೆಕ್ ವಿತರಣೆ ಮಾಡಿ, ಘಟನೆ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆದರು.
ನಂತರ ಮಾತನಾಡಿದ ಸಚಿವರು, ನಿನ್ನೆ ನಡೆದ ದುರಂತ ನಾಗರಿಕ ಸಮಾಜ ತಲೆತಗ್ಗಿಸುವಂತದ್ದಾಗಿದೆ. ಹತ್ಯೆ ಮಾಡಿರುವ ಆರೋಪಿಗಳು ಎಲ್ಲೇ ಇದ್ರೂ ಕೂಡ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತೆ. ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧವಾಗಿ ಕೆಲಸ ಮಾಡ್ತಿದೆ ಎಂದರು. ಸಂತ್ರಸ್ತ ಕುಟುಂಬಕ್ಕೆ ಸಿಎಂ 5 ಲಕ್ಷ ಪರಿಹಾರ ನೀಡಿದ್ದಾರೆ. ಕುಟುಂಬಕ್ಕೆ ಈಗಾಗಲೇ ಪರಿಹಾರವನ್ನ ಹಸ್ತಾಂತರ ಮಾಡಿದ್ದೇವೆ. ಸರ್ಕಾರದಿಂದ ಏನೇನು ನೆರವು ಕೊಡಬೇಕೆಂದು ತೀರ್ಮಾನ ಮಾಡಲಾಗಿದೆ. ಕಠಿಣ ಪರಿಸ್ಥಿತಿಯಲ್ಲಿ ಕೂಡ ಹತ್ಯೆ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತೆ ಎಂದರು.
ಇಲ್ಲಿರುವ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಸಾರ್ವಜನಿಕರು ಹೇಳಿದ್ದಾರೆ. ಕಮೀಷನರ್ ರೋಹಿಣಿ ಸಿಂಧೂರಿಗೆ ಸೂಚನೆ ನೀಡಿದ್ದೇನೆ. ತಕ್ಷಣ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶ ಕೊಡಲಾಗಿದೆ. ತಿಂಗಳಲ್ಲಿ ಹುಂಡಿಗಳನ್ನ ತೆಗೆಯುವುದಕ್ಕೆ ಆದೇಶ ಕೊಟ್ಟಿದ್ದೇವೆ. ಇನ್ನು ಮುಂದೆ ತಿಂಗಳಿಗೆ ಹುಂಡಿ ಹಣ ತೆಗೆಯುವಂತೆ ಬೇಕಾಗುವ ಕ್ರಮ ವಹಿಸಲಾಗುವುದು ಎಂದರು.