ಮಂಡ್ಯ:ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಿರುವುದನ್ನು ವಿರೋಧಿಸಿ ನಗರದಲ್ಲಿ ಇಂದು (ಸೋಮವಾರ) ಬಿಜೆಪಿ ಕಾರ್ಯಕರ್ತರು, ರೈತರು ರಸ್ತೆ ತಡೆದು ಪ್ರತಿಭಟಿಸಿದರು. ''ಕಾವೇರಿ ನಮ್ಮದು, ಕಾವೇರಿ ನೀರು ತಮಿಳುನಾಡಿಗೆ ಬಿಟ್ಟಿರುವುದು ಅನ್ಯಾಯ'' ಎಂದು ಕಿವಿ ಮೇಲೆ ಹೂ ಇಟ್ಟುಕೊಂಡು ರಾಜ್ಯ ಸರ್ಕಾರವನ್ನು ಅಣಕಿಸಿದರು. ಇದೇ ಸಂದರ್ಭದಲ್ಲಿ ಹುರುಳಿ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ನೀರಾವರಿ ಬೆಳೆ ಬಿಟ್ಟು ಅರೆ ಖುಷ್ಕಿ ಬೆಳೆ ಬೆಳೆಯುವಂತೆ ಕೃಷಿ ಸಚಿವ ಚಲುವರಾಯ ಸ್ವಾಮಿ ರೈತರಲ್ಲಿ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರತಿಭಟನಾಕಾರರು ಭತ್ತ, ಕಬ್ಬು ಬಿಟ್ಟು ಹುರುಳಿ ಬೆಳೆಯಬೇಕಾ? ಎಂದು ಹುರುಳಿ ಚೆಲ್ಲಿ ಕಿಡಿಕಾರಿದರು. ಹುರುಳಿ ಭಿತ್ತನೆ ಮಾಡಲು ಸೇರಿನಲ್ಲಿ ಅಳೆದು ಪ್ಯಾಕ್ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಸಂಸದೆ ಸುಮಲತಾ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾಧ್ಯಮಗಳೊಂದಿಗೆ ಮಾತನಾಡಿ, ''ಒಬ್ಬ ತಾಯಿ ತನ್ನ ಮಕ್ಕಳನ್ನು ಉಪವಾಸ ಇಟ್ಟು ಪಕ್ಕದ ಮನೆಯ ಮಕ್ಕಳಿಗೆ ಊಟ ಕೊಡಲ್ಲ. ಕೇಂದ್ರದಲ್ಲಿ ಕಾವೇರಿ ವಿಚಾರವನ್ನು ಮೊದಲು ಧ್ವನಿ ಎತ್ತಿದ್ದೇ ನಾನು. ನಮ್ಮ ರೈತರಿಗೆ ಅನ್ಯಾಯ ಆಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ನಮ್ಮಲ್ಲಿದೆ. ಇದನ್ನು ಗಮನದಲ್ಲಿಟ್ಟುಕೊಳ್ಳದೇ ಯಾವ ರೀತಿ ಕಾವೇರಿ ನೀರು ಬಿಡುಗಡೆ ಮಾಡಲಾಗಿದೆ? ನೀರು ಹಂಚಿಕೆ ಮಾಡಿರುವುದಕ್ಕೆ ಒಂದು ಸ್ಪಷ್ಟತೆಯಿಲ್ಲ. ಕಾವೇರಿ ನೀರಿನ ಸಮಸ್ಯೆ ಬಂದಾಗ, ಎಲ್ಲಾ ಕಡೆಗಳಲ್ಲೂ ಮಾತನಾಡಿದ್ದೇವೆ. ಪ್ರತಿ ಬಾರಿ ತಮಿಳುನಾಡು ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗ್ತಿದೆ. ನಮ್ಮ ಕಡೆಯಿಂದ ಸರಿಯಾಗಿ ನೀರು ಹಂಚಿಕೆ ಮಾಡುವುದರಲ್ಲಿ ವಿಫಲರಾಗಿದ್ದೇವೆ. ಯಾವ ಪ್ರಯತ್ನವನ್ನೂ ಮಾಡದೇ ತಮಿಳುನಾಡಿನವರು ಅರ್ಜಿ ಹಾಕಿದ ತಕ್ಷಣವೇ ನೀರು ಬಿಟ್ಟರೆ ರೈತರ ಗತಿ ಏನು?.''