ಅಂಬಿ ಹುಟ್ಟೂರಲ್ಲಿ ಹುಟ್ಟುಹಬ್ಬದ ಸಂಭ್ರಮ: ಸಮಾಧಿಗೆ ಪೂಜೆ ಸಲ್ಲಿಸಿದ ಸಂಸದೆ ಸುಮಲತಾ ಮಂಡ್ಯ: ರೆಬೆಲ್ ಸ್ಟಾರ್ ಅಂಬರೀಶ್ ರವರ 71ನೇ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಅಂಬಿ ಹುಟ್ಟೂರು ದೊಡ್ಡರಸಿನಕೆರೆ ಗ್ರಾಮಕ್ಕೆ ಸುಮಲತಾ ಅಂಬರೀಶ್ ಭೇಟಿ ಕೊಟ್ಟು ಗ್ರಾಮದಲ್ಲಿರುವ ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದರು. ಬಳಿಕ ಅಂಬಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗ್ರಾಮಸ್ಥರೊಂದಿಗೆ ಕೇಕ್ ಕತ್ತರಿಸಿ ಮಕ್ಕಳಿಗೆ ತಿನ್ನಿಸಿ ಅಂಬರೀಶ್ ಅವರ ಹುಟ್ಟುಹಬ್ಬವನ್ನು ಆಚರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬರೀಶ್ ಅವರನ್ನು ನಾನು ಮಾತ್ರವಲ್ಲ, ಅವರನ್ನು ಪ್ರೀತಿಸುತ್ತಿದ್ದ ಪ್ರತಿ ಅಭಿಮಾನಿಗಳು ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ನನ್ನ ಬಳಿ ಇಲ್ಲದೇ ಇರುವ ಅಂಬರೀಶ್ ಅವರ ಫೋಟೋಗಳನ್ನು ನನಗೆ ಕಳುಹಿಸಿ ಅವರ ನೆನಪು ತರಿಸುತ್ತಾರೆ. ಅಂಬರೀಶ್ ಅವರ ಮೇಲಿದ್ದ ಅಭಿಮಾನ ಎಲ್ಲೂ ಹೋಗಿಲ್ಲ. ವಿಶೇಷವಾಗಿ ಮಂಡ್ಯದ ಪ್ರತಿ ಮನೆಯಲ್ಲೂ ಅಂಬರೀಶ್ ಅಭಿಮಾನಿಗಳು ಇದ್ದಾರೆ. ಆ ಅಭಿಮಾನ ನೋಡಿದಾಗ ಧೈರ್ಯ, ಆಶೀರ್ವಾದ ಇದೆ ಎನ್ನಿಸುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಗ್ಯಾರಂಟಿ ಗೊಂದಲ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಸದ್ಯಕ್ಕೆ ನಾನು ಅದರ ಬಗ್ಗೆ ಕಮೆಂಟ್ ಮಾಡಲು ಇಷ್ಟ ಪಡಲ್ಲ. ಕಾಂಗ್ರೆಸ್ ಅವರು ಇನ್ನೊಂದಷ್ಟು ಟೈಮ್ ಕೊಡಿ ಎಂದು ಕೇಳಿದ್ದಾರೆ. ಪ್ರಚಾರದ ವೇಳೆ ಅವರು ನೀಡಿರುವ ಆಶ್ವಾಸನೆಯಂತೆ ನಡೆದುಕೊಳ್ಳಬೇಕು. ಆಶ್ವಾಸನೆ ಈಡೇರಿಸುತ್ತಾರೆ ಎಂದು ಜನ ಬಹುಮತ ನೀಡಿರೋದು. ಗ್ಯಾರಂಟಿ ಯೋಜನೆಯನ್ನು ಸಂಪೂರ್ಣವಾಗಿ ನೀಡಬೇಕು ಎಂದು ಆಗ್ರಹಿಸಿದರು.
ಮೇಲುಕೋಟೆ ಪರಾಜಿತ ಬಿಜೆಪಿ ಅಭ್ಯರ್ಥಿ ಇಂದ್ರೇಶ್ ಅವರು ನನ್ನಿಂದ ಸೋತ್ತಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಅವರ ಹೇಳಿಕೆ ಬಗ್ಗೆ ನಾನು ಮಾತಾಡಲು ಇಷ್ಟ ಪಡುವುದಿಲ್ಲ. ನಾನು ಯಾವಾಗಲೂ ಪ್ರತ್ಯಕ್ಷವಾಗಿ ನೇರವಾಗಿ ಹೇಳಿದ್ದೇನೆ. ಪಾಂಡವಪುರ ಕ್ಷೇತ್ರದ ಬಗ್ಗೆ ನನ್ನ ನಿಲುವನ್ನು ಮೊದಲೇ ಪಕ್ಷದ ವರಿಷ್ಠರಿಗೆ ತಿಳಿಸಿದ್ದೆ. ಇದು ಇಂದ್ರೇಶ್ ಹಾಗೂ ಪಕ್ಷದ ನಡುವೆ ಇರುವ ಪ್ರಶ್ನೆ. ಮ್ಯಾಚ್ ಫಿಕ್ಸಿಂಗ್ ಎಂದು ಹೇಳುವ ಅಗತ್ಯವಿಲ್ಲ ಎಂದು ಪ್ರತಿಕ್ರಿಯಿಸಿದರು.
ಸಂಸತ್‌ನಲ್ಲಿ ದೇವೇಗೌಡರ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಅವರು, ದೇವೇಗೌಡರು ನಮ್ಮ ಹಿರಿಯರು. ಅವರ ಮೇಲೆ ತುಂಬಾ ಅಭಿಮಾನ, ಗೌರವ ಇದೆ. ನೂತನ ಸಂಸತ್ ಉದ್ಘಾಟನೆ ಸಮಾರಂಭದಲ್ಲಿ ಅವರನ್ನು ಮಾತಾಡಿಸಿದ್ದು ಖುಷಿ ಆಯಿತು. ಅವರು ಸಹ ತುಂಬಾ ಅಭಿಮಾನದಿಂದ ಮಾತಾನಾಡಿದರು. ಮದುವೆ ಆಹ್ವಾನ ನೀಡಿದ್ದೇನೆ. ಎಲ್ಲ ಪಕ್ಷಗಳ ನಾಯಕರಿಗೂ ಆಹ್ವಾನ ನೀಡಿದ್ದೇವೆ ಎಂದರು.
ಮಂಡ್ಯದಲ್ಲೇ ಬೀಗರ ಊಟ: ಅಭಿಷೇಕ್ ಅಂಬರೀಶ್ ಮದುವೆ ತಯಾರಿ ವಿಚಾರವಾಗಿ ಮಾತನಾಡಿ, ಮದುವೆ ತಯಾರಿಯಲ್ಲಿ ನಾನು ಹೆಚ್ಚು ಭಾಗಿಯಾಗಲು ಆಗಿಲ್ಲ. ಈಗ ಸಮಯ ಸಿಕ್ಕಿದೆ ನಮ್ಮ ಕುಟುಂಬ ಸದಸ್ಯರು ಎಲ್ಲ ಸೇರಿ ತಯಾರಿ ಮದುವೆ ತಯಾರಿಯಲ್ಲಿದ್ದಾರೆ. ಮಂಡ್ಯದಲ್ಲೇ ಬೀಗರ ಊಟ ಇದೆ. ಬೀಗರ ಊಟದ ಸಿದ್ಧತೆಯೂ ನಡೆಯುತ್ತಿದೆ. ಮಂಡ್ಯದಲ್ಲಿ ಯಾವ ಜಾಗದಲ್ಲಿ ಎನ್ನುವುದೇ ಸದ್ಯದಲ್ಲೆ ಹೇಳುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ:'ಮಂಡ್ಯದ ಗಂಡಿ'ಗೆ 71ನೇ ಹುಟ್ಟುಹಬ್ಬ: ರೆಬೆಲ್ ಸ್ಟಾರ್ ಕುರಿತು 10 ಸ್ವಾರಸ್ಯಕರ ಸಂಗತಿ!