ಕರ್ನಾಟಕ

karnataka

ETV Bharat / state

ಕೆಆರ್‌ಎಸ್‌ ಸುತ್ತಮುತ್ತಲಿನ ಅಕ್ರಮ ಗಣಿಗಾರಿಕೆ ನಿಲ್ಲಿಸಿ: ಅಮಿತ್‌ ಶಾಗೆ ಮನವಿ ಸಲ್ಲಿಸಿದ ಸುಮಲತಾ - ಕೇಂದ್ರ ಗೃಹ ಸಚಿವ ಅಮಿತ್ ಶಾ

ಕೇಂದ್ರ ಗೃಹ ಸಚಿವರನ್ನು ಭೇಟಿಯಾಗಿರುವ ಸಂಸದೆ ಸುಮಲತಾ ಅವರು, ಕೆಆರ್​ಎಸ್​ ಜಲಾಶಯಕ್ಕೆ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಆಗುತ್ತಿರುವ ಸಮಸ್ಯೆಗಳನ್ನು ವಿವರಿಸಿದ್ದಾರೆ. ಅಲ್ಲದೆ ಸಮಿತಿ ರಚಿಸಿ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.

mandya-mining
ಮಂಡ್ಯ ಗಣಿ ವಿವಾದ

By

Published : Jul 30, 2021, 3:29 PM IST

ಮಂಡ್ಯ: ಕೃಷ್ಣರಾಜ ಸಾಗರ ಜಲಾಶಯ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಗಣಿ ವಿವಾದ ಇದೀಗ ಕೇಂದ್ರ ಸರ್ಕಾರದ ಅಂಗಳಕ್ಕೆ ಕಾಲಿಟ್ಟಿದೆ.

ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಮಂಡ್ಯ ಸಂಸದೆ ಸುಮಲತಾ ಅಂಬರೀಷ್, ಕೆಆರ್​ಎಸ್​ ಜಲಾಶಯಕ್ಕೆ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಆಗುತ್ತಿರುವ ಸಮಸ್ಯೆಗಳನ್ನು ವಿವರಿಸಿದ್ದಾರೆ. ಈ ಸಮಸ್ಯೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಉನ್ನತ ಮಟ್ಟದ ಸಮಿತಿ ರಚಿಸಿ, ತನಿಖೆ ನಡೆಸಬೇಕು ಎಂದು ಕೋರಿದ್ದಾರೆ.

ಮನವಿ ಪತ್ರ

ಜಿಲ್ಲೆಯ ರಾಜಕಾರಣದಲ್ಲಿ ಕೆಆರ್​ಎಸ್​ ಜಲಾಶಯದ ಸುರಕ್ಷೆ ದೊಡ್ಡ ಚರ್ಚೆಯ ವಿಷಯವಾಗಿದೆ. ಜಲಾಶಯ ಅಪಾಯದಲ್ಲಿದೆ ಎಂದು ಸಂಸದೆ ಸುಮಲತಾ ಹೇಳಿಕೆ ಒಂದು ಕಡೆಯಾದ್ರೆ, ಮತ್ತೊಂದೆಡೆ ಜಲಾಶಯ ಸುರಕ್ಷಿತವಾಗಿದೆ ಎಂದು ಜೆಡಿಎಸ್​ನ ಹಲವು ಶಾಸಕರು ಸಮರ್ಥಿಸಿಕೊಂಡಿದ್ದಾರೆ. ರಾಜಕಾರಣದ ಕೆಸರೆರಚಾಟಗಳಿಗೆ ಕಾರಣವಾಗಿದ್ದ ಈ ಪ್ರಕರಣ ಇದೀಗ ಕೇಂದ್ರ ಸರ್ಕಾರದ ಅಂಗಳ ಪ್ರವೇಶಿಸುವ ಮೂಲಕ ಹಲವು ಚರ್ಚೆಗೆ ಕಾರಣವಾಗುತ್ತಿದೆ.

ಇತ್ತೀಚೆಗೆ ಸಂಸದೆ ಸುಮಲತಾ ಕೆಆರ್‌ಎಸ್ ಡ್ಯಾಂ ಹಾಗೂ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಕನ್ನಂಬಾಡಿ ಮುಂದೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದ್ದು, ಡ್ಯಾಂನಿಂದ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಬೇಕು ಎಂದು ತಿಳಿಸಿದ್ದರು. ಅಲ್ಲದೇ ಮಹಾರಾಜರ ತ್ಯಾಗದಿಂದ ಕೆಆರ್​ಎಸ್​ ಡ್ಯಾಮ್ ನಿರ್ಮಾಣವಾಗಿದೆ. ಇಂತಹ ಆಸ್ತಿಯನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ. ಸದ್ಯಕ್ಕೆ ಯಾವುದೇ ಸಮಸ್ಯೆಯಿಲ್ಲವೆಂಬ ತಾತ್ಸಾರ ಸಲ್ಲದು ಎನ್ನುವ ಮಾತನ್ನು ಹೇಳಿದ್ದರು.

ಅಷ್ಟೇ ಅಲ್ಲದೇ ನಾವು ಇಂತಹ ಜಲಾಶಯ ನಿರ್ಮಿಸಲು ಸಾಧ್ಯವೇ? ಡ್ಯಾಂನಲ್ಲಿ ಸಣ್ಣಪುಟ್ಟ ಬಿರುಕು ಕಾಣಿಸಿಕೊಂಡಿದ್ದರಿಂದ 67 ಕೋಟಿ ರೂ. ವೆಚ್ಚದಲ್ಲಿ ದುರಸ್ತಿ ಮಾಡಿದ್ದಾರೆ. ನನ್ನ ಹೇಳಿಕೆಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸುಮಲತಾ ತಿಳಿಸಿದ್ದರು.

ಹೀಗಾಗಿ ಇಂದು ಕೃಷ್ಣರಾಜಸಾಗರ ಅಣೆಕಟ್ಟೆಯ ಸುತ್ತಮುತ್ತಲ ಪ್ರದೇಶದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅತಿರೇಕದ ಅಕ್ರಮ ಗಣಿಗಾರಿಕೆ ನಿಲ್ಲಿಸುವಂತೆ ಗೃಹ ಸಚಿವ ಅಮಿತ್​​ ಶಾ ಅವರಿಗೆ ಮನವಿ ಮಾಡಿದರಲ್ಲದೇ ಡ್ಯಾಂ ಸುರಕ್ಷತೆ ಕುರಿತು ತನಿಖೆ ನಡೆಸಲು ಮತ್ತು ಪರಿಹರಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲು ಕೋರಿದ್ದಾರೆ.

ABOUT THE AUTHOR

...view details