ಕರ್ನಾಟಕ

karnataka

ETV Bharat / state

ಗಣಿಗಾರಿಕೆಯಿಂದ ಡ್ಯಾಂ​ಗೆ ತೊಂದರೆ ಅಂತಾ ಸರ್ಟಿಫಿಕೇಟ್ ಕೊಡೋವರೆಗೂ ಕಾಯಬೇಕಾ?: ಸುಮಲತಾ

ಗಣಿಗಾರಿಕೆಯಿಂದ ಕೆಆರ್​ಎಸ್​ ಅಣೆಕಟ್ಟೆಗೆ ಬಿರುಕು ಆತಂಕ ಹಿನ್ನೆಲೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಇಂದು ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

dam
ಕೆಆರ್​ಎಸ್​ ಪರಿಶೀಲನೆ ನಡೆಸಿದ ಸಂಸದೆ ಸುಮಲತಾ ಅಂಬರೀಶ್

By

Published : Jul 14, 2021, 5:25 PM IST

ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಅವರು ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದ್ರ ಜೊತೆಗೆ, ಬೇಬಿ ಬೆಟ್ಟದ ಕಲ್ಲು ಗಣಿಗಾರಿಕೆಯಿಂದ ಕನ್ನಂಬಾಡಿ ಅಣೆಕಟ್ಟೆಗೆ ಯಾವ ರೀತಿ ಅಪಾಯವಿದೆ ಎಂಬುದರ ಬಗೆಗೂ ಅಧಿಕಾರಿಗಳಿಂದ ಮಾಹಿತಿ ಪಡೆದರು. 68 ಕೋಟಿ ರೂ ವೆಚ್ಚದಲ್ಲಿ ಅಣೆಕಟ್ಟೆ ಗೇಟ್ ಬದಲಾವಣೆ ಕಾಮಗಾರಿ ಪರಿಶೀಲಿಸಿ ನೂತನ ತಂತ್ರಜ್ಞಾನದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಕೆಆರ್​ಎಸ್​ ಪರಿಶೀಲನೆ ನಡೆಸಿದ ಸಂಸದೆ ಸುಮಲತಾ ಅಂಬರೀಶ್

ಡ್ಯಾಂನಲ್ಲಿ ಕಣ್ಣಿಗೆ ಕಾಣುವ ಬಿರುಕು ಕಾಣುತ್ತಿಲ್ಲ. ಇದರ ಬಗ್ಗೆ ವಿಸ್ತೃತ ಅಧ್ಯಯನ ಆಗಬೇಕಿದೆ. ಆ ರೀತಿ ಕಣ್ಣಿಗೆ ಕಾಣೋದಾದರೆ ಯಾರು ಬೇಕಾದರೂ ಸರ್ಟಿಫಿಕೇಟ್ ಕೊಡ್ತಾರೆ. ಆದರೆ ಅದರದ್ದೇ ಆದ ಪ್ರೋಸೆಸ್ ಇದೆ ಎಂದು ಅವರು ಸುದ್ದಿಗೋಷ್ಟಿಯಲ್ಲಿ ಹೇಳಿದರು.

'ನನ್ನ ಹೇಳಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ'

ಏರ್ ಬಬಲ್, ಕ್ಯಾವಿಟ್, ಗ್ರೋವಿಟ್ ಏನೇ ಇರಬಹುದು. ನನ್ನ ಹೇಳಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಸರ್ಟಿಫಿಕೇಟ್ ಕೊಡೋ ಏಜೆನ್ಸಿ ಬೇರೆ ಇದೆ ಅಂತಾ ಅಧಿಕಾರಿಗಳು ಹೇಳ್ತಾರೆ. ಅಕ್ರಮ ಗಣಿಗಾರಿಕೆಯಿಂದ ಡ್ಯಾಂಗೆ ತೊಂದರೆ ಅಂತಾ ಸರ್ಟಿಫಿಕೇಟ್ ಕೊಡೋವರೆಗೂ ಕಾಯಬೇಕಾ?. ಡ್ಯಾಮ್​​ಗೆ ಅನಾಹುತ ಆದ ಮೇಲೆ ಏನು ಮಾಡಲು ಸಾಧ್ಯ?. ಆದ ಮೇಲೆ ಪೇಚಾಡುವುದಕ್ಕಿಂತ ಮುಂಜಾಗ್ರತೆ ಒಳಿತಲ್ಲವೇ ಎಂದರು.

ಇಂದು ಅಪಾಯ ಇಲ್ಲದೇ ಇರಬಹುದು, ಮುಂದಿನ ಹತ್ತು ವರ್ಷಗಳಲ್ಲಿ ತೊಂದರೆ ಆದರೆ ಯಾರು ಹೊಣೆ?. ಅಂತಹ ಅಣೆಕಟ್ಟನ್ನು ಕಟ್ಟಲಂತೂ ಸಾಧ್ಯವಿಲ್ಲ, ಹಾಗಾಗಿ ಅದನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡುವುದೇ ತಪ್ಪಾ? ಎಂದು ಪ್ರಶ್ನಿಸಿದರು.

ಇವತ್ತಿನ ನನ್ನ ಪರಿಶೀಲನೆಯಿಂದ ಇನ್ನೂ ಆತಂಕ ದೂರ ಆಗಿಲ್ಲ. ಅಧಿಕಾರಿಗಳು ಕೆಲವು ಮಾಹಿತಿ ಕೊಟ್ಟಿದ್ದಾರೆ. ಅವರಲ್ಲೇ ಕ್ಲಾರಿಟಿ ಇರಲಿಲ್ಲ. ನಾನೂ ಕೆಲವು ಮಾಹಿತಿ ಕೇಳಿದ್ದೇನೆ. ಅದನ್ನು ಅವರು ಕೊಡಲಿ ಎಂದು ಹೇಳಿದರು.

'ನನ್ನದು ಒಂಟಿ ಧ್ವನಿ ಅಲ್ಲ'

ನನ್ನದು ಒಂಟಿ ಧ್ವನಿ ಅಲ್ಲ. ನೂರಾರು ಮೌನ ಧ್ವನಿಗಳು ನನ್ನ ಜೊತೆಗಿವೆ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿವೆ. ಮೈನಿಂಗ್ ಲಾಬಿ ವಿರುದ್ಧ ಹೋರಾಟ ಮಾಡಲು ನನಗೇನೂ ಭಯ ಇಲ್ಲ. ನಮ್ಮ ಗುರಿ ಮುಟ್ಟಿಯೇ ತೀರುತ್ತೇವೆ ಎಂದು ಸುಮಲತಾ ಹೇಳಿದರು. 2019 ರಲ್ಲೇ ಸಂಸತ್‌ನಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದೇನೆ. ಆದ್ರೆ ಆರಂಭದಿಂದಲೂ ನನ್ನ ಹೇಳಿಕೆ ತಿರುಚಲಾಗುತ್ತಿದೆ‌‌‌ ಎಂದರಲ್ಲದೇ ನನ್ನ ವೈಯಕ್ತಿಕ ತೇಜೋವಧೆ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

'ನಟೋರಿಯಸ್ ಅನ್ನೋ ಪದ ಹಾಸ್ಯಾಸ್ಪದ'

ಡ್ಯಾಂ ಬಿರುಕು ಬಿಟ್ಟಿದೆ ಅಂತಾ ಹೇಳಿದ್ದಕ್ಕೆ ದುರಸ್ತಿ ಕೆಲಸ ಮಾಡುತ್ತಿರುವುದು. ಶಾಸಕರ ನಟೋರಿಯಸ್ ಅನ್ನೋ ಪದ ಹಾಸ್ಯಾಸ್ಪದವಾಗಿದೆ ಎಂದರು. ಗಣಿಗಾರಿಕೆ ಕೆಆರ್‌ಎಸ್‌ಗಿಂತ ದೊಡ್ಡದಲ್ಲ. ತಾಂತ್ರಿಕ ಟೀಂ ಟ್ರಯಲ್ ಬ್ಲಾಸ್ಟ್ ಪರೀಕ್ಷೆ ನಡೆಸಲಿದೆ‌. ರೈತರು ಕೂಡ ಪರೀಕ್ಷೆ ನಡೆಸುವವರೆಗೆ ತಾಳ್ಮೆ ಇಟ್ಟುಕೊಳ್ಳಬೇಕು. ಮೊದಲು ಟ್ರಯಲ್ ಬ್ಲಾಸ್ಟ್ ಪರೀಕ್ಷೆ ನಡೆಸಲಿ ನೋಡೋಣ ‌ಎಂದರು.

ಇದೆಲ್ಲಾ ನನಗೆ ಬೇಕಿತ್ತಾ ನಾನು ಹೇಳಿದ ಮೇಲೆಯೇ ವಿವಾದ ಆಗಿದ್ದು, ನಾನು ಸುಮ್ಮನೆ ಇರಬಹುದಾಗಿತ್ತು ಅಲ್ವಾ?. ನಾನೇ ಎಲ್ಲಾ ಸಾಧಿಸಬೇಕು ಅಂತಾ ಹೇಳುತ್ತಿಲ್ಲ. ನನ್ನ ಧ್ವನಿ ಇಲ್ಲಿಗೆ ಕೊನೆಯಾಗೋದಿಲ್ಲ. ಮುಂದಿನ ದಿನಗಳಲ್ಲೂ ಹೋರಾಟ ನಡೆಯಲಿದೆ ಎಂದು ಹೇಳಿದರು.

'ಅರಸರಿಗೆ ನಾವು ದೇವಾಲಯ ಕಟ್ಟಬೇಕು'

ಮೈಸೂರಿನ ಅರಸರಿಗೆ ನಾವು ದೇವಾಲಯ ಕಟ್ಟಬೇಕು. ಅರಸರು ಹಣವಿಲ್ಲದ ಸಮಯದಲ್ಲಿ ಈ ಕನ್ನಂಬಾಡಿಯನ್ನು ಕಟ್ಟಿದ್ದಾರೆ. ಇವತ್ತು ಅಪಾಯವಿಲ್ಲ ಎಂದರೂ ಮುಂದೆ ಇರೋದಿಲ್ವಾ ಎಂದು ಪ್ರಶ್ನಿಸಿದರು.

'ಭದ್ರತಾ ಲೋಪ ಸರಿಪಡಿಸಬೇಕು'

ಗಣಿಗಾರಿಕೆ ಸಂಪೂರ್ಣವಾಗಿ ನಿಷೇಧಿಸಿ ಅಂತಾ ನಾನು ಹೇಳೋದಿಲ್ಲ. ಅದರೆ ಅಣೆಕಟ್ಟೆಗೆ ಯಾವುದೇ ಧಕ್ಕೆಯಾಗಬಾರದು. ಆ ರೀತಿ ಕ್ರಮ ಕೈಗೊಳ್ಳಬೇಕು. ಭದ್ರತಾ ಲೋಪದ ಕಡೆ ಗಮನಹರಿಸಬೇಕಿದೆ. ಪೊಲೀಸ್ ಇಲಾಖೆ, ನೀರಾವರಿ ನಿಗಮ ಗಣಿ ಇಲಾಖೆ ಡ್ಯಾಂ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳವೇಕು ಎಂದು ಸೂಚನೆ ನೀಡಿದರು.

ಪಾರ್ಟಿ ನಡೆಸದಂತೆ ಎಚ್ಚರಿಕೆ:

ಕಾವೇರಿ ಹಿನ್ನೀರಿನಲ್ಲಿ ಅಧಿಕಾರಿಗಳಾಗಲಿ, ಎಂಪಿ ಆಗಲಿ, ಎಂಎಲ್ಎ ಆಗಲಿ ಯಾಕೆ ಪಾರ್ಟಿ ನಡೆಸಬೇಕು? ಅವರ ಮೇಲೂ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಕಾವೇರಿ ಹಿನ್ನೀರಿನಲ್ಲಿ ಪಾರ್ಟಿ ಮಾಡಬಾರದು ಎಂದರು.

ಡ್ಯಾಂ ಬಗ್ಗೆ ಎಲ್ಲಾ ಇಲಾಖೆಗಳ ಜವಾಬ್ದಾರಿಯೂ ಇದೆ. ಅಲ್ಲದೇ ಅಣೆಕಟ್ಟು ಬಿರುಕು ವಿಚಾರವಾಗಿ ನನ್ನ ಬಳಿ ಇದ್ದ ತಾಂತ್ರಿಕ ಆಧಾರದ ಮೇಲೆ ನಾನು ಹೇಳಿಕೆ ನೀಡಿದ್ದೆ. ಜತೆಗೆ ಕೆಲವರ ಸಲಹೆ ಹಿನ್ನೆಲೆಯಲ್ಲಿ ಅಣೆಕಟ್ಟೆ ಸುರಕ್ಷತೆಯ ಆತಂಕ ವ್ಯಕ್ತಪಡಿಸಿದ್ದೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.

ABOUT THE AUTHOR

...view details