ಮಂಡ್ಯ : ಮಿಮ್ಸ್ ಆವರಣದಲ್ಲಿ ತುರ್ತು ಚಿಕಿತ್ಸಾ ವಾಹನಕ್ಕೆ ಸಂಸದೆ ಸುಮಲತಾ ಅಂಬರೀಶ್ ಚಾಲನೆ ನೀಡಿದರು. ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅನುದಾನದಿಂದ ಆ್ಯಂಬುಲೆನ್ಸ್ ನ್ನು ಸಂಸದರು ಕೊಡುಗೆಯಾಗಿ ನೀಡಿದ್ದಾರೆ.
ತುರ್ತು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಯ ಆ್ಯಂಬುಲೆನ್ಸ್ ಕೊರತೆ ನೀಗಿಸಲು ಕೊಡುಗೆ ಕೊಟ್ಟಿರುವ ಸಂಸದೆ, ಸುಮಾರು 46 ಲಕ್ಷ ವೆಚ್ಚದ ಐಸಿಯು ಫೆಸಿಲಿಟಿ ಹೊಂದಿರುವ ಆ್ಯಂಬುಲೆನ್ಸ್ ಇದಾಗಿದ್ದು, ಮಿಮ್ಸ್ ನಿರ್ದೇಶಕ ಡಾ.ಹರೀಶ್ ಗೆ ಈ ವಾಹನವನ್ನ ಹಸ್ತಾಂತರಿಸಿದರು.
ಮಂಡ್ಯದಲ್ಲಿ ಕರ್ನಾಟಕ ಬಂದ್ ಬಗ್ಗೆ ಸಂಸದೆ ಸುಮಲತಾ ಪ್ರತಿಕ್ರಿಯೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸುಮಲತಾ, ಬಂದ್‌ಗೆ ನನ್ನ ಬೆಂಬಲ ಇಲ್ಲ ಹೋರಾಟಕ್ಕೆ ನನ್ನ ಬೆಂಬಲ. ಸಮಸ್ಯೆಗೆ ಪರಿಹಾರ ಸಿಗೋದಾದ್ರೆ ಬಂದ್ ಮಾಡಬೇಕು. ಬಂದ್‌ನಿಂದ ಯಾರಿಗೆ ಉಪಯೋಗ, ಯಾರಿಗೆ ನಷ್ಟ ಅನ್ನೋದನ್ನ ಯೋಚನೆ ಮಾಡಬೇಕು. ವಿಚಾರಗಳ ಪರ ನಿಂತಾಗ ಕೆಲವೊಮ್ಮೆ ತ್ಯಾಗ ಮಾಡಬೇಕು. ಖಂಡಿತ ಬಂದ್‌ನಿಂದ ನಷ್ಟವಾಗುತ್ತದೆ ಎಂದರು.
ಬಂದ್‌ನಿಂದ ಕೇವಲ ಸಿನಿಮಾ ಇಂಡಸ್ಟ್ರಿಗೆ ಮಾತ್ರ ನಷ್ಟವಲ್ಲ. ಹೊಸ ವರ್ಷದ ವೇಳೆ ವ್ಯಾಪಾರಗಳು ಹೆಚ್ಚಾಗಿರುತ್ತದೆ. ಅಂದು ಬಂದ್ ಮಾಡಿದ್ರೆ ವ್ಯಾಪಾರಸ್ಥರಿಗೆ ತೊಂದರೆ. ಮಾನವೀಯತೆಯಿಂದ ಯೋಚನೆ ಮಾಡಬೇಕು. ಡಿ.31ರಂದೇ ಬಂದ್ ಮಾಡಬೇಕ ಅಥವಾ ಸರ್ಕಾರ ಏನು ಕ್ರಮವಹಿಸದಿದ್ದಾಗ ಬಂದ್ ಮಾಡಬೇಕಾ ಎನ್ನುವುದರ ಬಗ್ಗೆ ಯೋಚಿಸಬೇಕು ಎಂದು ಸಂಸದೆ ಸುಮಲತಾ ಹೇಳಿದ್ರು.
ಪೈರಸಿ ವಿರುದ್ಧ ನಮ್ಮೆಲ್ಲರ ಹೋರಾಟ :
ಪೈರಸಿಯನ್ನ ಗೂಂಡಾ ಕಾಯ್ದೆಯಡಿ ತಂದು ತಮಿಳುನಾಡು ಸರ್ಕಾರ ಯಶಸ್ವಿಯಾಗಿದೆ. ಪೈರಸಿ ಒಂದು ವೈರಸ್, ತಡೆಯವುದು ಕಷ್ಟ. ಆದರೆ ಪೈರಸಿ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮತಾಂತರ ನಿಷೇಧ ಕಾಯ್ದೆ ಬಗ್ಗೆ ತಿಳಿದು ಅದರ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ. MES ಉದ್ಧಟತನ ಬಗ್ಗೆ ಮಾತನಾಡಲು ಶೂನ್ಯ ವೇಳೆಯಲ್ಲಿ ಅರ್ಜಿ ಹಾಕಿದ್ದೆನು. ಆದರೆ ಶೂನ್ಯ ವೇಳೆ ಈ ಬಾರಿ ನಡೆಯಲಿಲ್ಲ. ಹಾಗಾಗಿ ಈ ವಿಷಯ ಕುರಿತು ಗೃಹ ಸಚಿವರಿಗೆ ಪತ್ರ ಬರೆಯುವುದಾಗಿ ಮಂಡ್ಯ ಸಂಸದರು ತಿಳಿಸಿದರು.