ಮಂಡ್ಯ: ಅಕ್ರಮ ಗಣಿ ಮಾಲೀಕರೇ ಸಕ್ರಮ ಗಣಿ ಮಾಲೀಕರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಜಿಲ್ಲೆಯಲ್ಲಿ ಅಕ್ರಮದ ಜೊತೆಗೆ ಸಕ್ರಮ ಗಣಿಗಾರಿಕೆ ಸ್ಥಗಿತಗೊಂಡಿರುವ ವಿಚಾರಕ್ಕೆ ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ಅಚ್ಚರಿಯ ಹೇಳಿಕೆ ನೀಡಿದರು.
ಅಕ್ರಮ ಮತ್ತು ಸಕ್ರಮ ಗಣಿಗಾರಿಕೆ ಬಗ್ಗೆ ಸಂಸದೆ ಸುಮಲತಾ ಅಂಬರೀಶ್ ಹೀಗಂದರು.. ಸಕ್ರಮ ಗಣಿಗಾರಿಕೆ ಮಾಡುವವರಿಗೆ ಅಕ್ರಮ ಗಣಿ ಮಾಲೀಕರಿಂದ ಬೆದರಿಕೆ :ನಮ್ಮ ಗಣಿಗಾರಿಕೆ ಪ್ರಾರಂಭವಾಗುವವರೆಗೆ ನೀವು ಗಣಿಗಾರಿಕೆ ನಡೆಸಬಾರದು ಎಂದು ಅಕ್ರಮ ಗಣಿಗಾರಿಕೆ ಮಾಲೀಕರು ಸಕ್ರಮ ಇರುವವರಿಗೆ ಬೆದರಿಕೆ ಹಾಕಿದ್ದಾರೆ. ಹಾಗಾಗಿ, ಈ ಕಾರಣಕ್ಕೆ ಸಕ್ರಮ ಗಣಿಗಾರಿಕೆಗಳು ಸ್ಥಗಿತಗೊಂಡಿವೆ ಎಂಬ ಮಾಹಿತಿ ನನಗೆ ಬಂದಿದೆ. ಸಕ್ರಮವಾಗಿರುವ ಗಣಿಗಾರಿಕೆ ಯಾರಿಂದಲೂ ಸಹ ನಿಲ್ಲಿಸೋಕೆ ಆಗುವುದಿಲ್ಲ ಎಂದರು.
ವೈಯಕ್ತಿಕ ಟೀಕೆ ಬಿಟ್ಟು ಅಭಿವೃದ್ಧಿ ಕೆಲಸದ ಬಗ್ಗೆ ಸದನದಲ್ಲಿ ಮಾತನಾಡಲಿ: ವೈಯಕ್ತಿಕ ಟೀಕೆ ಬದಲು ಅಭಿವೃದ್ಧಿ ಕೆಲಸಗಳ ಬಗ್ಗೆ ಜೆಡಿಎಸ್ ಶಾಸಕರು ಮಾತನಾಡಲಿ. ದಳಪತಿಗಳು ಅಧಿವೇಶನದಲ್ಲಿ ಏನು ಬೇಕಾದ್ರೂ ಮಾತನಾಡಲಿ. ಆದ್ರೆ, ಮಂಡ್ಯದ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚೆ ಮಾಡಿದ್ರೆ ಅದನ್ನು ಸ್ವಾಗತಿಸುತ್ತೇನೆ ಎಂದು ಜೆಡಿಎಸ್ ಶಾಸಕರಿಗೆ ಸಂಸದೆ ಸುಮಲತಾ ಟಾಂಗ್ ನೀಡಿದರು. ಮಂಡ್ಯದಲ್ಲಿ ದೊಡ್ಡ ದೊಡ್ಡ ಸಮಸ್ಯೆಗಳಿವೆ. ಕೊರೊನಾ, ಜನರ ಸಂಕಷ್ಟಗಳ ಬಗ್ಗೆ ಚರ್ಚೆ ಮಾಡಲಿ. ಅದನ್ನು ಬಿಟ್ಟು ವೈಯಕ್ತಿವಾಗಿ ನನ್ನ ವಿಚಾರಗಳನ್ನು ಚರ್ಚೆ ಮಾಡುವುದು ಅವರಿಗೆ ಬಿಟ್ಟಿದ್ದು ಎಂದರು.
ಜೆಡಿಎಸ್ ನವರಿಗೆ ಅರಿವು ಇಲ್ಲ :ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಮೊದಲು ಚರ್ಚಿಸಿ. ಅದನ್ನು ಬಿಟ್ಟು ಲೆಟರ್‌ನಲ್ಲಿ ಸುಮಲತಾ ಅಂಬರೀಶ್, ಅಮರನಾಥ್ ಅಂತಾ ಇದೆ. ಲೆಟರ್ ಕೆಳಗಡೆ ಯಾರ ಸಹಿ ಇದೆ, ಈ ಸಲ ಬೇರೆ ತರ ಸಹಿ ಮಾಡಿದ್ದಾರೆ. ಬೇರೆ ಯಾರೋ ಇವಾಗ ಸಹಿ ಮಾಡಿದ್ದಾರೆ. ಈ ರೀತಿಯ ವಿಚಾರಗಳನ್ನು ಚರ್ಚೆ ಮಾಡೋದಲ್ಲ. ಸದನದಲ್ಲಿ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕು ಎಂದು ಲೆಟರ್ ಹೆಡ್ ದುರ್ಬಳಕೆ ಬಗ್ಗೆ ಸದನದಲ್ಲಿ ಚರ್ಚಿಸುತ್ತೇನೆ ಎಂದಿದ್ದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯಗೆ ಸುಮಲತಾ ತಿರುಗೇಟು ನೀಡಿದರು.
ಒ ಅಂಡ್ ಎಂನಲ್ಲಾದ್ರೂ ಕಾರ್ಖಾನೆ ಪ್ರಾರಂಭಿಸಿ :ಮೈಶುಗರ್ ಪುನಾರಂಭ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ಈ ಬಗ್ಗೆ ಸಕ್ಕರೆ ಸಚಿವರನ್ನು ನಾನು ಭೇಟಿಯಾಗಿದ್ದೇನೆ. ಈ ವೇಳೆ ನಾನು ಸರ್ಕಾರವಾದರು ನಡೆಸಲಿ ಒ ಅಂಡ್ ಎಂ ಆದ್ರೂ ನೀಡಿ, ಆದಷ್ಟು ಬೇಗ ಕಾರ್ಖಾನೆ ಪ್ರಾರಂಭ ಮಾಡಿ ಎಂದಿದ್ದೆ ಎಂದು ತಿಳಿಸಿದ್ರು.
ರೈತರಿಗೆ ತಾಳ್ಮೆಯಿಂದ ಇರಿ ಎನ್ನಲು ಸಾಧ್ಯವಿಲ್ಲ :ಇನ್ನು, ಕಾರ್ಖಾನೆ ಆರಂಭವಾಗದೇ ರೈತರಿಗೆ ತೊಂದರೆಯಾಗುತ್ತಿದೆ. ಎರಡು ವರ್ಷಗಳ ಕಾಲ ತಾಳ್ಮೆಯಿಂದ ನಾವು ಕೇಳಿದ್ದೇವೆ. ಈಗ ರೈತರಿಗೆ ಇನ್ನೂ ತಾಳ್ಮೆಯಿಂದ ಇರಿ ಎಂದು ಹೇಳಲು ಸಾಧ್ಯವಿಲ್ಲ. ರೈತರು ಪ್ರತಿಭಟನೆ ಮಾಡುತ್ತಿರವುದು ಸರಿ. ರೈತರ ತಾಳ್ಮೆಯನ್ನು ಸರ್ಕಾರ ಪರೀಕ್ಷೆ ಮಾಡುತ್ತಿದೆ. ಸರ್ಕಾರ ಕೂಡಲೇ ಯಾವ ರೀತಿ ಕಾರ್ಖಾನೆ ಆರಂಭಿಸುತ್ತದೆ ಎನ್ನುವುದನ್ನು ಹೇಳಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಕಾರ್ಖಾನೆ ಆರಂಭದ ಹಿಂದೆ ಬಲವಾದ ರಾಜಕೀಯ :ಕಾರ್ಖಾನೆ ಪ್ರಾರಂಭಿಸುವುದರ ಹಿಂದೆ ಬಲವಾದ ರಾಜಕೀಯ ಪ್ರಭಾವ ಇರುವ ಕಾರಣ ಇಷ್ಟು ವರ್ಷ ಕಾರ್ಖಾನೆ ಆರಂಭವಾಗಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗಾಗಿ, ರೈತರ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಎಚ್ಚರಿಸಿದರು.