ಮಂಡ್ಯ: ಮೈ ಶುಗರ್ ಕಾರ್ಖಾನೆ ಆರಂಭದ ವಿಚಾರದಲ್ಲಿ ಅಡ್ಡಿಯಾದವರಿಗೆ ರೈತರ ಶಾಪ ತಟ್ಟಲಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.
ಕಾರ್ಖಾನೆ ಆರಂಭಕ್ಕೆ ಅಡ್ಡಿಪಡಿಸುತ್ತಿರುವ ಶಾಸಕರು ಹಾಗೂ ಹೋರಾಟಗಾರರ ವಿರುದ್ಧ ಸಂಸದೆ ಆಕ್ರೋಶ ಹೊರ ಹಾಕಿದರು. ರೈತರ ವಿಷಯದಲ್ಲಿ ಸ್ವಾರ್ಥದ ರಾಜಕಾರಣ ಮಾಡುತ್ತಿರುವವರಿಗೆ ಆ ದೇವರು ಕ್ಷಮಿಸಲ್ಲ. ರೈತರೂ ಕ್ಷಮಿಸಲ್ಲ ಎಂದರು.
ಕಬ್ಬು ಬೆಳೆಗಾರ ರೈತರು ಕಾರ್ಖಾನೆಯನ್ನು O&M ಮಾದರಿಯಲ್ಲಿ ಆರಂಭಿಸಲು ಈ ಹಿಂದೆ ಮೈತ್ರಿ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಸರ್ಕಾರ ಬದಲಾಗುತ್ತಿದ್ದಂತೆ ಇಲ್ಲಿನ ಶಾಸಕರು ವಿರೋಧ ವ್ಯಕ್ತಪಡಿಸ್ತಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.
ಕಾರ್ಖಾನೆ ಈ ಸರ್ಕಾರದ ಅವಧಿಯಲ್ಲಿ ತೆರೆದರೆ ಅದರ ಲಾಭ ಅವರಿಗೆ ಹೋಗಲಿದೆ ಎಂದು ಅವರಿಗೆ ಭಯ. ಅದಕ್ಕಾಗಿ ಅವರ ಎದೆಯಲ್ಲಿ ಆತಂಕ ಶುರುವಾಗಿದೆ. ಸಂಸದರು ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ಲಾಬಿ ಮಾಡುತ್ತಿದ್ದಾರೆ ಎಂಬುದನ್ನು ಹೇಳುತ್ತಿರುವುದು ಹಾಸ್ಯಾಸ್ಪದ ಎಂದರು.
ಒಂದು ಒಳ್ಳೆಯ ಉದ್ದೇಶವಿಟ್ಟುಕೊಂಡು ಕೆಲಸ ಮಾಡಿದರೂ ಈ ರೀತಿ ಆರೋಪ ಮಾಡುತ್ತಿದ್ದಾರೆ. ಈಗ ಬೇಡ ಎನ್ನುತ್ತಿರುವ ಅವರ ಹಿಂದೆ ಒಂದು ದುರದ್ದೇಶವಿದೆ ಎಂದು ಜೆಡಿಎಸ್ ಶಾಸಕರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು. ಕಾರ್ಖಾನೆ ಆರಂಭಿಸಲು ಒತ್ತಾಯಿಸಿ ಪ್ರಗತಿಪರ ರೈತರು ಪ್ರತಿಭಟನೆ ನಡೆಸಿದರು.